ಬೆಂಗಳೂರು: ನೂತನವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಎಸ್‍ಪಿ ಆಗಿ ಬಂದ ಮೇಲೆ ರವಿ ಡಿ. ಚನ್ನಣ್ಣನವರ್ ರೌಡಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದರು. ಇದೀಗ ನೆಲಮಂಗಲ ಪಟ್ಟಣದಲ್ಲಿ ಹೆಚ್ಚಾಗಿದ್ದ ಪೋಲಿ ಪುಂಡರ ಹಾವಳಿ ಹಿನ್ನೆಲೆಯಲ್ಲಿ ಹುಡುಗಿಯರ ಜೊತೆ ಅನುಚಿತ ವರ್ತನೆ ಹಾಗೂ ಅನುಮಾನಾಸ್ಪದ ಯುವಕರಿಗೆ ನೆಲಮಂಗಲ ಪಟ್ಟಣ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ನೆಲಮಂಗಲ ಪಟ್ಟಣದಲ್ಲಿ ಕೆಲ ತಿಂಗಳುಗಳಿಂದ ಪುಂಡ-ಪೋಕರಿಗಳ, ರೋಡ್ ರೋಮಿಯೋಗಳ ಹಾವಳಿ ಮಿತಿ ಮೀರಿ ಹೋಗಿತ್ತು. ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದರು. ಅದರಲ್ಲೂ ಕಾಲೇಜು ಶುರುವಾಗುವ ಹಾಗೂ ಬಿಡುವ ಸಮಯಕ್ಕೆ ಹಾಜರಾಗಿ ಕಾಲೇಜ್ ಕ್ಯಾಂಪಸ್, ಬಸ್ ನಿಲ್ದಾಣ, ನಡು ಬೀದಿಗಳಲ್ಲಿ ಕಾಲೇಜು ಹುಡುಗಿಯನ್ನ ಚುಡಾಯಿಸುತ್ತಾ ಕಾಟ ಕೊಡುತ್ತಿದ್ದರು.
ಸಾರ್ವಜನಿಕರಿಂದ ದೂರುಗಳು ಬರುತ್ತಿದ್ದ ಕಾರಣಕ್ಕೆ ನೆಲಮಂಗಲ ಠಾಣೆ ಪಿಎಸ್‍ಐ ಮಂಜುನಾಥ್ ತಂಡ ಮಾಡಿಕೊಂಡು ಸ್ಪೆಷಲ್ ಡ್ರೈವ್ ಮಾಡಿದ್ದಾರೆ. ಈ ವೇಳೆ ರಸ್ತೆಯಲ್ಲಿ ಕಂಡ ಕಂಡಲ್ಲಿ ರೋಡ್ ರೋಮಿಯೋಗಳು, ಪೋಕರಿಗಳಿಗೆ ಫುಲ್ ಅವಾಜ್ ಹಾಕಿದ್ದಾರೆ.
ಸುಮಾರು 20ಕ್ಕೂ ಹೆಚ್ಚು ಯುವಕರನ್ನು ಸ್ಟೇಷನ್ ಹತ್ತಿರ ಕರೆದುಕೊಂಡು ಬಂದು ವಿಚಾರಣೆ ಮಾಡಿ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ ಕಿವಿಗೆ ಓಲೆ, ಕೈ ದಾರ, ಅಸಭ್ಯ ಬಟ್ಟೆ ಧರಿಸಿದವರಿಗೆ ಸ್ಥಳದಲ್ಲೇ ದಂಡನೆ ನೀಡಿದ್ದಾರೆ. ಸಣ್ಣಪುಟ್ಟ ಕೇಸ್‍ಗಳಿದ್ದವರಿಗೆ ಜೋರಾಗಿ ವಾರ್ನಿಂಗ್ ಕೊಟ್ಟಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ರವಿ ಡಿ. ಚನ್ನಣ್ಣನವರ್ ಎಸ್‍ಪಿಯಾಗಿ ಬಂದ ಮೇಲೆ ಇಂತಹ ಕಾರ್ಯಾಚರಣೆ ನಡೆಯುತ್ತಿರುವುದಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.