– ರಾತ್ರೋರಾತ್ರಿ ರೌಡಿಶೀಟರ್ ಮನೆಗಳ ಮೇಲೆ ದಿಢೀರ್ ದಾಳಿ
ಬೆಂಗಳೂರು: ರಾತ್ರೋರಾತ್ರಿ ಶ್ರೀರಾಂಪುರ ಪೊಲೀಸರು ರೌಡಿಶೀಟರ್ ಮನೆಗಳ ಮೇಲೆ ದಿಢೀರ್ ದಾಳಿ ನಡೆಸಿದ್ದು, ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಶ್ರೀರಾಂಪುರ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ದಾಳಿ ಮಾಡಲಾಗಿದ್ದು, ಠಾಣಾ ವ್ಯಾಪ್ತಿಯ ರೌಡಿಶೀಟರ್‌ಗಳ ಮೇಲೆ ದಾಳಿ ನಡೆಸಿ ಬಿಸಿಮುಟ್ಟಿಸುವ ಕೆಲಸ ಮಾಡಿದ್ದಾರೆ. ನಿರಂತರವಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ ರೌಡಿಶೀಟರ್‌ಗಳನ್ನು ಪೊಲೀಸ್ ಠಾಣೆಗೆ ಕರೆತಂದು ಖಡಕ್ ವಾರ್ನ್ ಮಾಡಿ ಕಳುಹಿಸಿಕೊಟ್ಟಿದ್ದಾರೆ.
ಗಣೇಶ್ ತಂಬಿ, ಲೋಗನಾಥ್ ಸೇರಿದಂತೆ ಪ್ರಮುಖ ರೌಡಿಶೀಟರ್‌ಗಳನ್ನ ಕರೆ ತಂದು ಶ್ರೀರಾಂಪುರ ಇನ್ಸ್‌ಪೆಕ್ಟರ್ ಬೆಂಡೆತ್ತಿದ್ದಾರೆ. ರಸ್ತೆಗಳಲ್ಲಿ ನಿಂತು ಎದುರಿಸಿ ಬೆದರಿಸಿ ರಾಬರಿ ಮಾಡೋದು, ಮೊಬೈಲ್ ಕಳ್ಳತನ, ಹವಾ ಮೆಂಟೇನ್ ಮಾಡಿದರೆ ಬಾಲ ಕಟ್ ಮಾಡಿ ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಿಕೊಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವವರು ಕಡ್ಡಾಯವಾಗಿ ಠಾಣೆಗಳಿಗೆ ಬಂದು ತಮ್ಮ ಮುಖಗಳನ್ನ ತೋರಿಸಿ ಹೋಗಬೇಕು. ಪದೇ ಪದೇ ಅಪರಾಧ ಪ್ರಕರಣಗಳಲ್ಲಿ ಹೆಸರುಗಳು ಕೇಳಿ ಬಂದರೆ, ಮುಂದೆ ಆಗೋ ಅನಾಹುತಗಳಿಗೆ ನೀವೇ ಕಾರಣರಾಗಿರುತ್ತೀರಾ ಎಂದು ಶ್ರೀರಾಂಪುರ ಇನ್ಸ್‌ಪೆಕ್ಟರ್ ಎಚ್ಚರಿಕೆ ನೀಡಿದ್ದಾರೆ.
ಸುಮಾರು 25ಕ್ಕೂ ಹೆಚ್ಚು ಪುಡಾರಿಗಳನ್ನ ಕರೆತಂದು ಎಚ್ಚರಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಮನೆಗಳಿಗೆ ಹೋಗಿ ಪೋಷಕರಿಗೆ ಮಕ್ಕಳ ಬಗ್ಗೆ ಗಮನ ಇಡುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.