ಮಂಡ್ಯ: ಕರ್ತವ್ಯ ಮುಗಿಸಿ ವಾಪಸ್ ಆಗುತ್ತಿದ್ದ ವೇಳೆ ಪೊಲೀಸ್ ಸಿಬ್ಬಂದಿಯ ವಾಹನದ ಸ್ಟೇರಿಂಗ್ ಲಾಕ್ ಆಗಿ ವಾಹನ ಪಲ್ಟಿಯಾದ ಪರಿಣಾಮ 25 ಮಂದಿ ಪೊಲೀಸರಿಗೆ ಗಾಯವಾಗಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ತೈಲೂರು ಗ್ರಾಮ ಬಳಿ ಜರುಗಿದೆ.
ನಾಗಮಂಗಲ ತಾಲೂಕಿನ ಆದಿಚುಂಚನಗಿರಿಯ ರಥೋತ್ಸವ ಮುಗಿಸಿ ಮಂಡ್ಯಗೆ ವಾಪಸ್ ಬರುತ್ತಿದ್ದ ಕೆಎಸ್‌ಆರ್‌ಪಿ ತುಕಡಿ ಇದ್ದ ವಾಹನ ಪಲ್ಟಿಯಾಗಿದೆ. ಕಳೆದ ಎರಡು ದಿನಗಳಿಂದ ಚುಂಚನಗಿರಿಯ ಜಾತ್ರಾ ಮಹೋತ್ಸವದ ಕರ್ತವ್ಯದಲ್ಲಿ ಈ ಸಿಬ್ಬಂದಿ ತೊಡಗಿಕೊಂಡಿದ್ದರು.
Advertisement
Advertisement
ಇಂದು ರಥೋತ್ಸವ ಮುಗಿಸಿಕೊಂಡು ವಾಪಸ್ ಮಂಡ್ಯಗೆ ಬರುತ್ತಿರುವಾಗ ಕೆಎಸ್‌ಆರ್‌ಪಿ ವಾಹನ ಸ್ಟೇರಿಂಗ್ ಲಾಕ್ ಆಗಿದೆ. ಹೀಗಾಗಿ ಕೆಎಸ್‌ಆರ್‌ಪಿ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ ವಾಹನದಲ್ಲಿದ್ದ 25 ಮಂದಿಗೆ ಗಾಯಗಳಾಗಿವೆ. ಇದರಲ್ಲಿ ಸಾಗರ್, ರಾಘವೇಂದ್ರ, ರಾಮನಗೌಡ ಹಾಗೂ ಆನಂದ್ ಎಂಬವರಿಗೆ ಗಂಭೀರ ಗಾಯಗಳಾಗಿವೆ.
Advertisement
ನಂತರ ಸ್ಥಳೀಯರು ಪೊಲೀಸರ ನೆರವಿಗೆ ಬಂದು, ವಾಹನದೊಳಗೆ ಸಿಲುಕಿದ್ದ ಪೊಲೀಸ್ ಸಿಬ್ಬಂದಿಗಳನ್ನು ಹೊರಗೆ ತೆಗೆದು ಮದ್ದೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ. ಸದ್ಯ ಗಾಯಗೊಂಡಿರುವ ಪೊಲೀಸ್ ಸಿಬ್ಬಂದಿ ಮದ್ದೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಮದ್ದೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಜರುಗಿದೆ.