Connect with us

ಮಾಸ್ಕ್ ಕರ್ಚೀಫ್‍ನಿಂದ ಪೊಲೀಸರಿಗೆ ಸಿಕ್ಕಿಬಿದ್ರು ದರೋಡೆ ಗ್ಯಾಂಗಿನ 11 ಜನ

ಮಾಸ್ಕ್ ಕರ್ಚೀಫ್‍ನಿಂದ ಪೊಲೀಸರಿಗೆ ಸಿಕ್ಕಿಬಿದ್ರು ದರೋಡೆ ಗ್ಯಾಂಗಿನ 11 ಜನ

ಶಿವಮೊಗ್ಗ: ಹೆದ್ದಾರಿಗಳಲ್ಲಿ ಹೊಂಚು ಹಾಕಿ ರಾಬರಿ ಮಾಡುತ್ತಿದ್ದ ಗ್ಯಾಂಗ್ ಹಿಡಿಯುವುದರಲ್ಲಿ ಶಿವಮೊಗ್ಗ ದೊಡ್ಡಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಗ್ಯಾಂಗ್‍ನ ಹನ್ನೊಂದು ಜನರನ್ನು ಬಂಧಿಸಿದ್ದು, ಇನ್ನೂ ಇಬ್ಬರು ತಲೆಮರೆಸಿಕೊಂಡಿದ್ದಾರೆ.

ಬಂಧಿತರಾಗಿರುವ ಹನ್ನೊಂದೂ ಜನ 25 ವರ್ಷದ ಒಳಗಿನ ಯುವಕರಾಗಿದ್ದು, ಬಟ್ಟೆ ಅಂಗಡಿ, ಗ್ಯಾರೇಜ್, ಗಾರೆ, ಪೇಂಟಿಂಗ್ ಇತ್ಯಾದಿ ಕೆಲಸ ಮಾಡುತ್ತಿದ್ದವರು. ಶೋಕಿ ಜೀವನಕ್ಕಾಗಿ ರಾತ್ರಿ ವೇಳೆ ಹೆದ್ದಾರಿ ದರೋಡೆ ಕೃತ್ಯ ಆರಂಭಿಸಿದ್ದರು. ನಗರದ ಹೊರ ವಲಯದ ನಾನಾ ಕಡೆ ನಡೆದ ಹಲವು ಪ್ರಕರಣಗಳು ಇವರ ಮೇಲಿದೆ.

ಮಾಸ್ಕ್ ಕರ್ಚೀಫ್‍ನಿಂದ ಸಿಕ್ಕಿಬಿದ್ರು: ಈ ಎಲ್ಲಾ ಪ್ರಕರಣಗಳಲ್ಲೂ ದರೋಡೆಕೋರರು ಮುಖಕ್ಕೆ ತಲೆಬುರುಡೆ ಗುರುತು ಇರುವ ಕಪ್ಪು ಮಾಸ್ಕ್ ಕರ್ಚಿಫ್ ಧರಿಸಿದ್ದು ಪೊಲೀಸರ ತನಿಖೆಗೆ ನೆರವಾಯಿತು. ಇಂಥ ಮಾಸ್ಕ್ ಕರ್ಚಿಫ್ ಮಾರುವ ಅಂಗಡಿಗಳು ಹಾಗೂ ಇವುಗಳನ್ನು ಒಂದೇ ಬಾರಿಗೆ ಹೆಚ್ಚು ಕೊಂಡವರ ವಿವರಗಳನ್ನು ಪೊಲೀಸರು ಕಲೆ ಹಾಕಿದರು. ಆಗ ಆರೋಪಿಗಳ ಸುಳಿವು ಸಲೀಸಾಗಿ ಪೊಲೀಸರಿಗೆ ದೊರಕಿತು. ದರೋಡೆ ಹಣವನ್ನು ಹಂಚಿಕೊಂಡು ಆರಾಮಾಗಿ ಮಜಾ ಮಾಡುತ್ತಿದ್ದ ಈ ಗ್ಯಾಂಗಿನ ಒಬ್ಬೊಬ್ಬನ್ನೇ ಬಲೆಗೆ ಹಾಕಿಕೊಂಡ ಪೊಲೀಸರು ಅಂತಿಮವಾಗಿ ಹನ್ನೊಂದೂ ಜನರನ್ನ ಹಿಡಿಯುವಲ್ಲಿ ಸಫಲರಾಗಿದ್ದಾರೆ. ಇನ್ನೂ ಇಬ್ಬರು ನಾಪತ್ತೆ ಆಗಿದ್ದು, ಶೀಘ್ರವೇ ಶಿವಮೊಗ್ಗ ಪೊಲೀಸರ ಕೈಗೆ ಸಿಗುವ ನಿರೀಕ್ಷೆ ಇದೆ.

ಶಿವಮೊಗ್ಗ ಬೈಪಾಸ್‍ನಲ್ಲಿ ಹಾಗೂ ಹೊಳೆಹೊನ್ನೂರು ಮಾರ್ಗದ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಒಂದೇ ತಿಂಗಳ ಅಂತರದಲ್ಲಿ ಎರಡು ಲಾರಿಗಳನ್ನು ತಡೆದು, ಚಾಲಕ, ನಿರ್ವಾಹಕನಿಗೆ ಹಲ್ಲೆ ಮಾಡಿ ಅವರಲ್ಲಿದ್ದ ಹಣ, ಬಂಗಾರ ದರೋಡೆ ಮಾಡಲಾಗಿತ್ತು. ಇದೇ ರೀತಿ ನಗರ ಹೊರ ಹೊಲಯದ ನಾನಾ ಕಡೆಗಳಲ್ಲೂ ಬೈಕ್, ಕಾರು, ಲಾರಿ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ದರೋಡೆ ಮಾಡಿದ ಬಗ್ಗೆ ದೂರುಗಳು ದಾಖಲಾಗಿದ್ದವು.

ಹೊರ ರಾಜ್ಯದ ಲಾರಿಗಳ ಚಾಲಕರು ವಿಶ್ರಾಂತಿಗೆಂದು ತಂಗಿದಾಗ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ದಾಳಿ ಮಾಡುತ್ತಿದ್ದ ಈ ಗುಂಪು ಅವರಿಂದ ಹಣ, ಬಂಗಾರ ಕಿತ್ತುಕೊಂಡು ಪರಾರಿ ಆಗುತ್ತಿತ್ತು. ಈ ಆರೋಪಿಗಳಿಂದ ಬೈಕ್, ಮಾರಕಾಸ್ತ್ರಗಳು, ಹಾಗೂ ಮಾಸ್ಕ್ ಕರ್ಚೀಫ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಇವರಲ್ಲೆರೂ 20ರಿಂದ 25 ವರ್ಷದ ಒಳಗಿನವರು. ಕೆಲವರು ಕ್ರಿಮಿನಲ್ ಹಿನ್ನೆಲೆ ಉಳ್ಳವರು. ಇನ್ನು ಕೆಲವು ಹೊಸಬರಾಗಿದ್ದಾರೆ.

ಈ ಗ್ಯಾಂಗ್‍ನ ವಿವರಗಳನ್ನು ಪತ್ರಿಕಾಗೋಷ್ಠಿಯಲ್ಲಿ ನೀಡಿದ ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಅಶೋಕ್ ಖರೆ, ಎರಡು ತಿಂಗಳ ಅವಧಿಯಲ್ಲಿ ನಡೆದ ಒಟ್ಟು ಆರು ಪ್ರಕರಣಗಳು ಈ ಗ್ಯಾಂಗ್‍ನ ಕೃತ್ಯ. ತನಿಖೆಯಿಂದ ಇನ್ನಷ್ಟು ಪ್ರಕರಣಗಳು ಬೆಳಕಿಗೆ ಬರಲಿವೆ ಎಂದು ಹೇಳಿದರು.

ಈ ಆರೋಪಿಗಳನ್ನು ಪತ್ತೆ ಹಚ್ಚಿದ ತಂಡದ ವೃತ್ತ ನಿರೀಕ್ಷಕ ಗುರುರಾಜ್, ಪಿಎಸ್‍ಐಗಳಾದ ಅಭಯಪ್ರಕಾಶ್, ಅನಿತಾ ಕುಮಾರಿ, ಸಿಬ್ಬಂದಿಗಳಾದ ಕಿರಣ್, ಪ್ರಸನ್ನ ಫಾರೂಕ್, ಮನೋಹರ ಇನ್ನಿತರರು ಇದ್ದರು.

Advertisement
Advertisement