– 154 ವರ್ಷದ ಬಳಿಕ ಗರೋಡಿಯಲ್ಲಿ ಸ್ಥಗಿತಗೊಂಡ ಕೋಳಿ ಅಂಕ
– ದೈವದ ಮೊರೆ ಹೋದ ಭಕ್ತರು, ಆಡಳಿತ ಮಂಡಳಿ
ಮಂಗಳೂರು: ತುಳುನಾಡಿನ ಸಾಂಪ್ರದಾಯಿಕ ಆಚರಣೆಗಳಿಗೆ ಇದೀಗ ಪೊಲೀಸರು ತಡೆಯೊಡ್ಡುತ್ತಿದ್ದಾರೆ. ಕಾನೂನಿನ ನೆಪವೊಡ್ಡಿ ಸಾಂಪ್ರದಾಯಿಕ ಆಚರಣೆ ನಡೆಸದಂತೆ ತಾಕೀತು ಮಾಡಲಾಗಿದೆ. ಎಂತಹ ಕಠಿಣ ಸಂದರ್ಭದಲ್ಲೂ ನಿಲ್ಲದ ಮಂಗಳೂರಿನ ಕಂಕನಾಡಿ ಗರೋಡಿ ಜಾತ್ರೆಯ ಕೋಳಿ ಅಂಕಕ್ಕೆ (Cock Fighting) ಈ ಬಾರಿ ಸಂಕಷ್ಟ ಎದುರಾಗಿದೆ. ಹೀಗಾಗಿ, ಅತ್ತ ಭಕ್ತರು, ಇತ್ತ ದೈವಸ್ಥಾನದ ಆಡಳಿತ ಸಮಿತಿ ದೈವದ ಮೊರೆ ಹೋಗಿದೆ.
ಇತ್ತೀಚೆಗಷ್ಟೇ ವಿಟ್ಲದ ಕಜಂಬುಶ್ರೀ ಉಳ್ಲಾಲ್ತಿ ದೇವಸ್ಥಾನದ ಜಾತ್ರೋತ್ಸವದಲ್ಲಿ ಕೋಳಿ ಅಂಕಕ್ಕೆ ತಡೆಯೊಡ್ಡಲಾಗಿದ್ದು ಭಾರೀ ಸುದ್ದಿಯಾಗಿತ್ತು. ಪುತ್ತೂರು ಕಾಂಗ್ರೆಸ್ ಶಾಸಕ ಅಶೋಕ್ ರೈ ಆಗಮಿಸಿ ಕೋಳಿ ಅಂಕ ನಡೆಸುವಂತೆ ಮಾಡಿದ್ದು ವಿವಾದಕ್ಕೂ ಕಾರಣವಾಗಿತ್ತು. ಬಿಜೆಪಿ ಮುಖಂಡರೂ ತೆರಳಿ ಅಂಕ ನಡೆಸುವಂತೆ ಒತ್ತಡ ಹಾಕಿದ್ರು. ಈ ನಡುವೆ ಕಾಂಗ್ರೆಸ್ ಶಾಸಕ, ಬಿಜೆಪಿ ಮುಖಂಡರು ಸೇರಿದಂತೆ ಹಲವರ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಇದೀಗ ಅಂತಹದ್ದೇ ಪರಿಸ್ಥಿತಿ ಮಂಗಳೂರು ನಗರದ ಕಂಕನಾಡಿಯ ಗರೋಡಿಯಲ್ಲೂ ಎದುರಾಗಿದೆ. ಕಾನೂನಿನ ನೆಪವೊಡ್ಡಿ ಕಂಕನಾಡಿ ಶ್ರೀಬ್ರಹ್ಮ ಬೈದರ್ಕಳ ಗರೋಡಿ ಕ್ಷೇತ್ರದ (Shree Brahma Baidarkala Garadi Kshetra) ಕೋಳಿ ಅಂಕಕ್ಕೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಇದನ್ನೂ ಓದಿ: ನಿರ್ಬಂಧದ ನಡುವೆಯೂ ಕೋಳಿ ಅಂಕ; ಪುತ್ತೂರು ಶಾಸಕ ಅಶೋಕ್ ರೈ ಸೇರಿ 17 ಮಂದಿ ವಿರುದ್ಧ ಕೇಸ್
ಕರಾವಳಿ ಭಾಗದಲ್ಲಿ ಕೋಳಿ ಅಂಕಕ್ಕೆ ಭಾರೀ ಮಹತ್ವವಿದೆ. ಧಾರ್ಮಿಕ ಜಾತ್ರಾ ಕಾರ್ಯಕ್ರಮಗಳು ನಡೆಯುವ ಸಂದರ್ಭದಲ್ಲಿ ಕೋಳಿ ಅಂಕವನ್ನು ಸಾಂಪ್ರದಾಯಿಕವಾಗಿ ನಡೆಸಲಾಗುತ್ತದೆ. ಅದರಲ್ಲೂ ಮಂಗಳೂರು ನಗರದ ಕಂಕನಾಡಿಯ ಶ್ರೀಬ್ರಹ್ಮ ಬೈದರ್ಕಳ ಗರೋಡೆ ಜಾತ್ರೆಯ ಕೋಳಿ ಅಂಕಕ್ಕೆ ವಿಶೇಷ ಮಹತ್ವವಿದೆ. ಇಲ್ಲಿ ನಡೆಯುವ ಕೋಳಿ ಅಂಕದಲ್ಲಿ ಪಾಲ್ಗೊಳ್ಳಲೆಂದೇ ಅದೆಷ್ಟೋ ಭಕ್ತರು ಹರಕೆ ಹೊತ್ತಿರುತ್ತಾರೆ. ಈ ಮಣ್ಣಿಗೆ ತಂದು ತಾವು ಸಾಕಿದ ಕೋಳಿಯ ಒಂದು ಹನಿ ರಕ್ತ ಭೂಮಿಗೆ ಬಿದ್ದರೂ, ತಮ್ಮ ಕಷ್ಟ ಪರಿಹಾರವಾಗುತ್ತದೆ ಅನ್ನೋ ನಂಬಿಕೆ ಜನರಲ್ಲಿದೆ. ಹೀಗೆ, ಕಳೆದ 154 ವರ್ಷಗಳಿಂದ ನಡೆದುಕೊಂಡು ಬಂದ ಸಂಪ್ರದಾಯಕ್ಕೆ ಈ ಬಾರಿ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದೆ. ಇದರಿಂದಾಗಿ ಭಕ್ತರು ಕೂಡ ಆತಂಕಕ್ಕೊಳಗಾಗಿದ್ದಾರೆ.
ಈ ಹಿಂದೆ ಅಯೋಧ್ಯೆ ಗಲಾಟೆ, ಕೋಮು ದಳ್ಳುರಿ, ಕೋವಿಡ್ ಸಮಯದಲ್ಲೂ ಗರೋಡಿ ಜಾತ್ರೆಯ ಕೋಳಿ ಅಂಕಕ್ಕೆ ತಡೆಯುಂಟಾಗಿರಲಿಲ್ಲ. ಕೋವಿಡ್‌ನಲ್ಲೂ ಒಂದು ದಿನದ ಸಾಂಪ್ರದಾಯಿಕ ಕೋಳಿ ಅಂಕ ನಡೆದಿತ್ತು. ಗರೋಡಿ ಜಾತ್ರೆಯ ಧ್ವಜಾರೋಹಣ ದಿನದಿಂದ ಧ್ವಜಾರೋಹಣದ ಐದು ದಿನದವರೆಗೂ ಕೋಳಿ ಅಂಕ ನಡೆಯುವುದು ಸಂಪ್ರದಾಯ. ಈ ಬಾರಿ ಕೋಳಿ ಅಂಕ ನಡೆಸದಂತೆ ಪೊಲೀಸ್ ಪಹರೆಯನ್ನೂ ಹಾಕಲಾಗಿದೆ. ಸಂಪ್ರದಾಯ ಪಾಲಿಸಲು ಅವಕಾಶ ಕೊಡಿ ಅಂತಾ ದೈವಸ್ಥಾನದ ಆಡಳಿತ ಸಮಿತಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಧ್ವಜಾರೋಹಣದ ದಿನ ದೈವ ದರ್ಶನದ ವೇಳೆ ದೈವಸ್ಥಾನದವರು, ಭಕ್ತರು ಪ್ರಾರ್ಥಿಸಿ ಈ ವಿಚಾರ ಪ್ರಸ್ತಾಪವಾಗಿದ್ದು, ಎಲ್ಲವನ್ನೂ ಬಗೆಹರಿಸುವುದಾಗಿ ದೈವವೂ ಅಭಯ ನೀಡಿದೆ. ಇದನ್ನೂ ಓದಿ: ಕೋಳಿ ಅಂಕ ನಿಲ್ಲಬಾರದು – ಅರೆಸ್ಟ್ ಮಾಡೋದಾದ್ರೆ ಮೊದಲು ನನ್ನನ್ನೇ ಬಂಧಿಸಿ: ಶಾಸಕ ಅಶೋಕ್ ರೈ

