ಕಾರವಾರ: 5.06 ಕೋಟಿ ರೂ. ವೆಚ್ಚದಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದಲ್ಲಿ ನಿರ್ಮಾಣವಾಗುತ್ತಿರುವ ಪೊಲೀಸ್ ಸಿಬ್ಬಂದಿ ಗೃಹ ವಸತಿ ಕಟ್ಟಡಗಳ ಕಾಮಗಾರಿ ನಿಗದಿತ ಸಮಯವನ್ನು ದಾಟಿ ವಿಳಂಬವಾಗುತ್ತಿದೆ. ಇದರಿಂದ ಕಟ್ಟಡ ಸಿಗಬಹುದು ಎಂದು ಕಾಯುತ್ತಿರುವ ಸಿಬ್ಬಂದಿಗೆ ಗೃಹಪ್ರವೇಶ ಭಾಗ್ಯ ದೊರೆಯದಂತಾಗಿದೆ.
ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ನಿಗಮದ ವತಿಯಿಂದ ಶಿರಸಿಯ ಝೂ ಸರ್ಕಲ್ ಬಳಿ ಪೊಲೀಸರ ಗೃಹ ವಸತಿ ಕಟ್ಟಡ ನಿರ್ಮಾಣವಾಗುತ್ತಿದೆ. ಶಿರಸಿ ವ್ಯಾಪ್ತಿಯ ಪೊಲೀಸರ ಗೃಹ ವಸತಿ ಕಟ್ಟಡದಲ್ಲಿ 24 ಪೊಲೀಸ್ ಕಾನ್ಸ್‌ಟೇಬಲ್ ಹಾಗೂ 2 ಪಿಎಸ್‍ಐ ಕೊಠಡಿಗಳು ತಲೆ ಎತ್ತಿ ನಿಂತಿದೆ. 2019ರ ಮೇ 15ಕ್ಕೆ ಕಾಮಗಾರಿ ಮುಗಿಸಬೇಕು ಎಂಬ ಕಾಲಮಿತಿಯನ್ನು ಮೊದಲು ಹಾಕಿದ್ದರು. ಆದರೆ ಮಧ್ಯದಲ್ಲಿ ಮಳೆ ಬಂದ ಕಾರಣ ಎರಡು ತಿಂಗಳು ಹೆಚ್ಚುವರಿ ಕಾಲಾವಕಾಶ ನೀಡಲಾಗಿತ್ತು. ಈಗ ಹೆಚ್ಚುವರಿ ಗಡವು ಮುಗಿದು ನಾಲ್ಕೈದು ತಿಂಗಳು ಕಳೆದರೂ ಸಹ ಕಟ್ಟಡ ನಿರ್ಮಾಣ ಪೂರ್ಣಗೊಂಡಿಲ್ಲ.
Advertisement
Advertisement
ಶಿರಸಿಯ ಜೊತೆಗೆ ಏಕಕಾಲಕ್ಕೆ ಬನವಾಸಿಯಲ್ಲಿಯೂ ಕಟ್ಟಡ ನಿರ್ಮಾಣವಾಗುತ್ತಿದೆ. 12 ಕಾನ್ಸ್‌ಟೇಬಲ್ ಮತ್ತು 2 ಪಿಎಸ್‍ಐಗಳಿಗೆ ಕ್ವಾರ್ಟರ್ಸ್ ನಿರ್ಮಾಣವಾಗುತ್ತಿದೆ. ಕಟ್ಟಡಗಳಲ್ಲಿ ಇಲೆಕ್ಟ್ರಿಲ್ ವರ್ಕ್ ಸೇರಿದಂತೆ ಸಣ್ಣಪುಟ್ಟ ಕೆಲಸ ಬಾಕಿಯಿದ್ದು, ಗುತ್ತಿಗೆ ವಾಯ್ದೆ ಮುಗಿದು ಹಲವು ತಿಂಗಳುಗಳು ಕಳೆದರೂ ಇನ್ನೂ ವಾಸಕ್ಕೆ ಕಟ್ಟಡ ಲಭ್ಯವಾಗುತ್ತಿಲ್ಲ. ಅಲ್ಲದೇ ವಸತಿ ಗೃಹ ಇಲ್ಲದ ಸಿಬ್ಬಂದಿ ಸರ್ಕಾರದಿಂದ ನೀಡುವ ಹಣದಲ್ಲಿ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಕೇವಲ 2 ಸಾವಿರ ಹಣ ಮಾತ್ರ ಬರುವ ಕಾರಣ ಶಿರಸಿಯಲ್ಲಿ ವಾಸಿಸಲು ಯಾವುದಕ್ಕೂ ಸಾಲುವುದಿಲ್ಲ ಎಂಬುದು ಸಿಬ್ಬಂದಿ ಕೂಗಾಗಿದೆ.
Advertisement
Advertisement
ಸಮಸ್ತ ನಾಗರಿಕರ, ಸಮಾಜದ ಶ್ರೇಯಸ್ಸನ್ನು ಕಾಪಾಡುವ ಪೊಲೀಸ್ ಸಿಬ್ಬಂದಿ ಈಗ ಸರ್ಕಾರಿ ವಸತಿ ಗೃಹ ಇಲ್ಲದೇ ಪರದಾಡುವಂತಾಗಿದೆ. ಆದರಿಂದ ಶೀಘ್ರದಲ್ಲಿ ಕಟ್ಟಡ ನಿರ್ಮಾಣ ಪೂರ್ಣಗೊಳಿಸಿ, ಸಿಬ್ಬಂದಿಗೆ ಮನೆ ಹಂಚಿಕೆ ಮಾಡಿದಲ್ಲಿ ಅವರಿಗೆ ಅನುಕೂಲ ಆಗಲಿದೆ.