ಹಾಸನ: ದರೋಡೆ ನಾಟಕವಾಡಿ 9.5 ಲಕ್ಷ ರೂ. ಹಣವನ್ನು ಗುಳುಂ ಮಾಡಲು ಕ್ರಿಮಿನಲ್ ಐಡಿಯಾ ಮಾಡಿದ್ದ ಚಾಲಕಿ ವ್ಯಕ್ತಿಯೊಬ್ಬ ತಾನೇ ಪೊಲೀಸ್ ಬಲೆಗೆ ಬಿದ್ದಿರುವ ಘಟನೆ ಹಾಸನದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಹಾಸನ ಹೊರವಲಯದ ಹೊಸ ಕೊಪ್ಪಲು ನಿವಾಸಿಯಾಗಿರುವ ಕೋಳಿ ಫಾರಂ ಚಂದನ್ ಬಂಧಿತ ಆರೋಪಿ. ಹಾಸನದ ಬಡಾವಣೆ ಪೊಲೀಸರು ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಸತ್ಯ ಹೊರಂಬಿದಿದೆ.
ಏನಿದು ಪ್ರಕರಣ?
ನವೆಂಬರ್ 26 ರಂದು ಕೋಳಿ ಮಾರಾಟ ಮಾಡಿ ಅಂಗಡಿಗಳಿಂದ ಸಂಗ್ರಹಿಸಿದ್ದ 9.5 ಲಕ್ಷ ರೂ. ಹಣವನ್ನು ಚಂದನ್ ಹಾಸನದ ಕೈಗಾರಿಕಾ ಪ್ರದೇಶದಲ್ಲಿರುವ ಪೂಜಾ ಫೀಡ್ಸ್ ಮಾಲೀಕರಿಗೆ ತಲುಪಿಸಬೇಕಿತ್ತು. ಆದರೆ ಶುಂಠಿ ಬೆಳೆಯಲು ಐದಾರು ಲಕ್ಷ ರೂ. ಸಾಲ ಮಾಡಿಕೊಂಡಿದ್ದ ಚಂದನ್, ಹೇಗಾದರೂ ಮಾಡಿ ಇಷ್ಟೂ ಹಣ ಲಪಟಾಯಿಸಿದರೆ ನನ್ನ ಸಮಸ್ಯೆ ಬಗೆಹರಿಯಲಿದೆ ಎಂದು ಕ್ರಿಮಿನಲ್ ಐಡಿಯಾ ಮಾಡಿದ್ದ.
ಅದರಂತೆಯೇ ನಾನು ಬೈಕಿನಲ್ಲಿ ಹಣದೊಂದಿಗೆ ಬರುವಾಗ ಇಬ್ಬರು ಅಪರಿಚಿತರು ನನ್ನನ್ನು ಅಡ್ಡಗಟ್ಟಿ ಚಾಕುವಿನಿಂದ ಇರಿದು ಹಣ ಕಸಿದು ಪರಾರಿಯಾದರು ಎಂದು ಬಿಂಬಿಸಿದ್ದಾನೆ. ನಂತರ ತಾನೇ ಆಸ್ಪತ್ರೆಗೆ ದಾಖಲಾಗಿದ್ದಲ್ಲದೇ, ಹಾಸನದ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದನು. ಪೊಲೀಸರಿಗೆ ಚಂದನ್ ನಡೆಯ ಬಗ್ಗೆ ಅನುಮಾನ ಬಂದಿದೆ. ಎಂದಿನಂತೆ ಠಾಣೆಯಲ್ಲಿ ತಮ್ಮ ಪೊಲೀಸ್ ಶೈಲಿಯಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಿದಾಗ ದರೋಡೆಯ ನಾಟಕ ಬಯಲಾಗಿದೆ.
ಆರೋಪಿ ಚಂದನ್ ತನಗೆ ಗೊತ್ತಿರುವ ಲೋಕಿ ಮತ್ತು ನವೀನ ಎಂಬವರೊಂದಿಗೆ ಸೇರಿ ಹಣ ದರೋಡೆ ಮಾಡಲು ಪ್ಲಾನ್ ಮಾಡಿದ್ದನು. ನನ್ನೊಂದಿಗೆ ಸಹಕಾರ ನೀಡಿದರೆ ನಿಮಗೆ ಎರಡೂ ಲಕ್ಷ ರೂ. ನೀಡುವೆ ಎಂದು ಆಮಿಷ ಕೂಡ ಒಡ್ಡಿದ್ದನು. ಅದರಂತೆಯೇ ಮೂವರೂ ಸೇರಿ ದರೋಡೆಯ ನಾಟಕವಾಡಿ ಯಾರದೋ ದುಡ್ಡನ್ನು ಯಾಮಾರಿಸಲು ಹೈಡ್ರಾಮವನ್ನು ಮಾಡಿದ್ದರು.
ಚಂದನ್‍ನನ್ನು ಈಗ ಬಂಧಿಸಲಾಗಿದ್ದು ಉಳಿದ ಇಬ್ಬರು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಲೋಕಿ ಮತ್ತು ನವೀನ್ ಈ ಹಿಂದೆ ಹಲವು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪ ಎದುರಿಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv