ಶಿವಮೊಗ್ಗ: ಮಾರಿಹಬ್ಬಕ್ಕೆ ಬಲಿ ಕೊಡುತ್ತಾರೆ ಎಂಬ ಕಾರಣದಿಂದ ಎರಡು ಕೋಣಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕು ಕೋಮಾರನಹಳ್ಳಿಯಲ್ಲಿ ನಡೆದಿದೆ. ಪೊಲೀಸರು ಕೋಣಗಳನ್ನು ವಶಕ್ಕೆ ಪಡೆದುಕೊಂಡ ಬಳಿಕ ಗ್ರಾಮಸ್ಥರು ಠಾಣೆಯ ಮುಂದೆ ಪ್ರತಿಭಟನೆ ಮಾಡಿದ ಘಟನೆಯೂ ನಡೆದಿದೆ.
ಕೋಮಾರನಹಳ್ಳಿಯಲ್ಲಿ ಮೂರು ದಿನಗಳ ಕಾಲ ಮಾರಿಹಬ್ಬ ನಡೆಯಲಿದೆ. ಗ್ರಾಮಸ್ಥರು ಹಬ್ಬಕ್ಕಾಗಿ ಎರಡು ಕೋಣಗಳನ್ನು ತಂದಿದ್ದರು. ಈ ಕೋಣಗಳನ್ನು ಹಬ್ಬಕ್ಕೆ ಬಲಿ ಕೊಡ್ತಾರೆ ಎಂಬ ವಿಷಯ ತಿಳಿದ ಕೆಲ ಸಂಘಟನೆಗಳ ಕಾರ್ಯಕರರ್ತರು ದೂರು ಸಲ್ಲಿಸಿದ್ರು. ದೂರಿನನ್ವಯ ಪೊಲೀಸರು ಗ್ರಾಮಕ್ಕೆ ಬಂದು ಕೋಣಗಳನ್ನು ವಶಪಡಿಸಿಕೊಂಡು ಲಾರಿಗೆ ಹಾಕಿಕೊಂಡಿದ್ದರಿಂದ ಗ್ರಾಮಸ್ಥರು ಆಕ್ರೋಶಗೊಂಡು ಪ್ರತಿಭಟನೆ ಆರಂಭಿಸಿದರು.
Advertisement
Advertisement
ಪೂಜೆಗಾಗಿ ಈ ಕೋಣಗಳು ಬೇಕೇ ಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದರಿಂದ ಗ್ರಾಮದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೂಡಲೇ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಮುತ್ತುರಾಜ್ ಸ್ಥಳಕ್ಕೆ ಭೇಟಿ ನೀಡಿ, ಗ್ರಾಮದ ಮುಖಂಡರ ಜೊತೆ ಮಾತುಕತೆ ನಡೆಸಿದರು. ಕೋಣಗಳನ್ನು ಪೂಜೆಗೆ ಮಾತ್ರ ಬಳಸಬೇಕು. ನಂತರ ಪೊಲೀಸರಿಗೆ ಹಿಂದಿರುಗಿಸಬೇಕು ಎಂಬ ಷರತ್ತಿನ ಮೇಲೆ ಕೋಣಗಳನ್ನು ಗ್ರಾಮಸ್ಥರಿಗೆ ನೀಡಲಾಯಿತು. ಪೂಜೆ ಕಾರಣಕ್ಕಾಗಿ ಗ್ರಾಮದಲ್ಲೇ ಬಿಟ್ಟ ಕೋಣಗಳಿಗೆ ರಾತ್ರಿ ಇಡೀ ಪೊಲೀಸರ ಕಾವಲು ಹಾಕಲಾಗಿತ್ತು.
Advertisement
ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಹಾಕಿದ್ದರಿಂದ ಕೋಣಗಳು ತಮ್ಮ ಜೀವವನ್ನು ಉಳಿಸಿಕೊಂಡವು. ಹೀಗಾಗಿ ಗ್ರಾಮಸ್ಥರು ಕೋಣಗಳನ್ನು ಬಲಿ ನೀಡದೇ ಮಾರಿ ಹಬ್ಬ ಆಚರಿಸಿದರು.