ಬೆಂಗಳೂರು: ರಾಜ್ಯದ 15 ಕ್ಷೇತ್ರಗಳಲ್ಲಿ ಬೈ ಎಲೆಕ್ಷನ್ ಚುನಾವಣೆ ನಡೆಯುತ್ತಿದೆ. ಇಡೀ ರಾಜ್ಯವೇ ಕುತೂಹಲದಿಂದ ನೋಡುತ್ತಿರುವ ಕ್ಷೇತ್ರ ಅಂದರೆ ಅದು ಹೊಸಕೋಟೆ ಕ್ಷೇತ್ರ, ಇಲ್ಲಿ ಅಭ್ಯರ್ಥಿಗಳು ಹಾಗೂ ಸ್ಟಾರ್ ನಾಯಕರ ಕ್ಯಾಂಪೇನ್‍ಗಳ ಬಿರುಸಿನ ಪ್ರಚಾರ ಆರೋಪ ಪ್ರತ್ಯಾರೋಪಗಳ ವಾಕ್ ಸಮರದಿಂದ ರಣರಂಗವಾಗಿದೆ. ಮತದಾನಕ್ಕೆ ಇನ್ನು ಕೇವಲ ಒಂದೇ ದಿನ ಬಾಕಿ ಉಳಿದಿದ್ದು, ಮತದಾನ ಪ್ರಕ್ರಿಯೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಂತಿಯುತವಾಗಿ ನಡೆಯಲು ಈಗಾಗಲೇ ಬೆಂಗಳೂರು ಗ್ರಾಮಾಂತರ ಪೋಲಿಸರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.
ಹೊಸಕೋಟೆ ವಿಧಾನಸಭಾ ಕ್ಷೇತ್ರ ಹೈ ವೋಲ್ಟೇಜ್ ಕ್ಷೇತ್ರವಾಗಿದ್ದು ಒಂದು ರೀತಿಯಲ್ಲಿ ಬೂದಿ ಮುಚ್ಚಿದ ಕೆಂಡದ ರೀತಿಯಲ್ಲಿ ಇಲ್ಲಿ ವಾತಾವರಣ ನಿರ್ಮಾಣವಾಗಿದೆ. ಒಂದೆಡೆ ಬಿಜೆಪಿ ಅಭ್ಯರ್ಥಿಯ ಪರ ಕ್ಷೇತ್ರದಲ್ಲಿ ಪಕ್ಷದ ಘಟಾನುಘಟಿ ನಾಯಕರಾದ ಸಿಎಂ ಯಡಿಯೂರಪ್ಪ, ಆರ್ ಆಶೋಕ್ ಸೇರಿದಂತೆ ಹಲವು ನಾಯಕರು ಪ್ರಚಾರ ನಡೆಸಿದರೆ. ಕಾಂಗ್ರೆಸ್ ವತಿಯಿಂದಲ್ಲೂ ಮಾಜಿ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ಹಲವು ನಾಯಕರು ಬಿರುಸಿನ ಪ್ರಚಾರಗಳನ್ನು ನಡೆಸಿದ್ದಾರೆ. ಮಂಗಳವಾರ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು, ಅಭ್ಯರ್ಥಿಗಳು ಚುನಾವಣೆಯ ಕೊನೆಯ ದಿನಗಳ ಕಸರತ್ತನ್ನು ನಡೆಸುತ್ತಿದ್ದಾರೆ.
Advertisement
Advertisement
ಇಂತಹ ಪರಿಸ್ಥಿತಿಯಲ್ಲಿ ಹೊಸಕೋಟೆ ಕ್ಷೇತ್ರದ ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪೋಲಿಸರು ಹಾಗೂ ಪ್ಯಾರ ಮಿಲಿಟರಿ ಪಡೆ, ಅರೆಸೇನ ಪಡೆಗಳನ್ನು ನಿಯೋಜನೆ ಮಾಡಲಾಗಿದೆ. ಈ ಕ್ಷೇತ್ರದಲ್ಲಿ ಒಟ್ಟು 297 ಗ್ರಾಮಗಳಿದ್ದು, 286 ಮತಗಟ್ಟೆಗಳಿವೆ. ಅದರಲ್ಲಿ 85 ಸೂಕ್ಷ್ಮ ಮತಗಟ್ಟೆಯಾಗಿದ್ದು, 201 ಸಾಮಾನ್ಯ ಮತಗಟ್ಟೆ, 25 ಮೊಬೈಲ್ ಸೆಕ್ಟರ್, 12 ಸೂಪರ್ವೈಸಿ ಮೊಬೈಲ್ ಸೆಕ್ಟರ್ ಗಳನ್ನು ಒಳಗೊಂಡಿದೆ.
Advertisement
ಬೆಂಗಳೂರು ಜಿಲ್ಲೆಯ ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್, ಕಾನ್ಸ್‌ಟೇಬಲ್, 1000 ಹೋಮ್ ಗಾರ್ಡ್ ಗಳ ನಿಯೋಜನೆಯನ್ನು ಮಾಡಿಕೊಂಡಿದ್ದು, 5 ಜನ ಡಿವೈಎಸ್‍ಪಿ, 4 ಕೆಎಸ್‌ಆರ್‌ಪಿ, 4 ಪ್ಯಾರ ಮಿಲಿಟರಿ ಪಡೆಯನ್ನು ಬಂದೋಬಸ್ತ್‌ಗಾಗಿ ನಿಯೋಜನೆ ಮಾಡಲಾಗಿದೆ.
Advertisement
ಈಗಾಗಲೇ ಹೊಸಕೋಟೆ ಕ್ಷೇತ್ರಕ್ಕೆ ಆಗಮಿಸಿರುವ ಕರ್ನಾಟಕ ರಾಜ್ಯ ಪೋಲಿಸ್ ಪಡೆ ಹಾಗೂ ಪ್ಯಾರ ಮಿಲಿಟರಿ, ಹೋಮ್ ಗಾರ್ಡ್ ಸಿಬ್ಬಂದಿ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಗಳ ಮಾಹಿತಿ ಜೊತೆಗೆ ಈ ಹಿಂದೆ ಚುನಾವಣೆಗಳಲ್ಲಿ ನಡೆದಿದ್ದ ಘಟನೆಗಳನ್ನು ಆಧರಿಸಿ ಇಂದು ಹೊಸಕೋಟೆ ಪಟ್ಟಣದಲ್ಲಿ ಪಥಸಂಚಲನ ಮಾಡುವ ಮೂಲಕ ಉಪಚುನಾವಣೆ ಶಾಂತಿಯುತವಾಗಿ ನಡೆಯಬೇಕು, ಕಾನೂನು ಸುವ್ಯವಸ್ಥೆಗೆ ಕಾಪಾಡಬೇಕು ಎಂದು ಜಾಗೃತಿ ಮೂಡಿಸಲಿದ್ದಾರೆ.
ಕ್ಷೇತ್ರದಲ್ಲಿ ನೀತಿಸಂಹಿತೆ ಉಲ್ಲಂಘನೆಗೆ ಸಂಬಂಧಪಟ್ಟಂತೆ 11 ಪ್ರಕರಣಗಳು ದಾಖಲಾಗಿದ್ದು, 13 ಲಕ್ಷದ 5 ಸಾವಿರ ನಗದು, 105 ಕುಕ್ಕರ್, 105 ಹಾಟ್ ಬಾಕ್ಸ್ ಸೇರಿದಂತೆ 45 ಸೀರೆಗಳನ್ನು ವಶಕ್ಕೆ ಪಡೆಯಲಾಗಿದೆ. ಮತದಾರರಿಗೆ ಆಮಿಷ ಒಡ್ಡಲು ಬಳಸಿದ್ದ ವಾಹನಗಳನ್ನು ಕೂಡ ಜಪ್ತಿ ಮಾಡಿದ ಪೋಲಿಸರು ತನಿಖೆ ನಡೆಸುತ್ತಿದ್ದು, ದೋಷರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತದೆಂದು ಬೆಂಗಳೂರು ಗ್ರಾಮಾಂತರ ಎಸ್‍ಪಿ ರವಿ ಡಿ ಚನ್ನಣ್ಣನವರ್ ತಿಳಿಸಿದ್ದಾರೆ.
ಕ್ಷೇತ್ರದ ಅಭ್ಯರ್ಥಿಗಳ ಅಬ್ಬರದ ಪ್ರಚಾರ ಅಂತ್ಯವಾಗಿದೆ. ಹೀಗಾಗಿ ಮನೆ ಮನೆ ಪ್ರಚಾರ ನಡೆಸಿ ಮತದಾರರನ್ನು ತನ್ನತ್ತ ಸೆಳೆಯಲು ರಣತಂತ್ರಗಳನ್ನು ರೂಪಿಸುತ್ತಿದ್ದಾರೆ.