Dakshina Kannada
ಮಂಗಳೂರಿನ ಜಿಲ್ಲಾ ಕಾರಾಗೃಹಕ್ಕೆ ಪೊಲೀಸ್ ರೈಡ್-ಸಿಕ್ಕಿದ್ದೇನು ಗೊತ್ತಾ?

ಮಂಗಳೂರು: ನಗರದ ಜಿಲ್ಲಾ ಕಾರಾಗೃಹಕ್ಕೆ ಬೆಳ್ಳಂಬೆಳಗ್ಗೆ ಪೊಲೀಸರು ದಾಳಿ ನಡೆಸಿದ್ದಾರೆ. ಜೈಲಿನೊಳಗೆ ಶಸ್ತ್ರಾಸ್ತ್ರ ರವಾನೆಯಾಗಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಡಿಸಿಪಿ ಹನುಮಂತರಾಯ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ.
ದಾಳಿ ವೇಳೆ ಗಾಂಜಾ ಪ್ಯಾಕೆಟ್, ಹುಕ್ಕಾ, ಎರಡು ರಾಡ್, ಎರಡು ಚೂರಿ, ಎರಡು ಮೊಬೈಲ್ ಮತ್ತು ಡ್ರಗ್ಸ್ ಸೇವಿಸುವ ಸಿರಿಂಜ್ ಪತ್ತೆಯಾಗಿದೆ. ದಾಳಿ ವೇಳೆ 50 ಪೊಲೀಸ್ ಅಧಿಕಾರಿಗಳು ಮತ್ತು 129 ಮಂದಿ ಪೊಲೀಸ್ ಪೇದೆಗಳು ಭಾಗಿಯಾಗಿದ್ದರು.
ಮಂಗಳೂರು ಜೈಲಿನಲ್ಲಿ ಈ ಹಿಂದೆ ಹಲವು ಬಾರಿ ಹೊಡೆದಾಟ, ಹಲ್ಲೆ ಪ್ರಕರಣಗಳು ನಡೆದಿರುವುದರಿಂದ ಪೊಲೀಸರು ಹೆಚ್ಚಿನ ನಿಗಾ ಇಟ್ಟಿದ್ದಾರೆ. ಎರಡು ವರ್ಷದ ಹಿಂದೆ ಇದೇ ಜೈಲಿನ ಒಳಗೆ ಕೈದಿಗಳಿಬ್ಬರ ಹತ್ಯೆಯೂ ನಡೆದಿತ್ತು.
