ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕಿನ ಚಿನ್ನಸಂದ್ರ ಗ್ರಾಮದ ಬಳಿ 7 ಒಂಟೆಗಳನ್ನು ಚಿಂತಾಮಣಿ ಗ್ರಾಮಾಂತರ ಪೊಲೀಸರು ರಕ್ಷಣೆ ಮಾಡಿದ್ದಾರೆ.
ಪ್ರಾಣಿ ದಯಾ ಸಂಘದ ಸದಸ್ಯರು ನೀಡಿದ ದೂರಿನ ಮೇರೆಗೆ ಚಿನ್ನಸಂದ್ರ ಗ್ರಾಮ ಹೊರವಲಯದ ಬೆಟ್ಟ ಗುಡ್ಡಗಳಲ್ಲಿ ಇದ್ದ 7 ಒಂಟೆಗಳನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಮಾಂಸಹಾರಕ್ಕಾಗಿ ಚಿನ್ನಸಂದ್ರ ಗ್ರಾಮದ ಕೆಲವರು ಈ ಒಂಟೆಗಳನ್ನು ಸಾಕುತ್ತಿದ್ದರು ಎನ್ನಲಾಗಿದೆ.
ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ. ಸದ್ಯ ರಕ್ಷಣೆ ಮಾಡಲಾಗಿರುವ ಒಂಟೆಗಳನ್ನು ಮಂಡ್ಯ ಜಿಲ್ಲೆಯ ಪಾಂಡವಪುರದ ಬಳಿಯ ಗೋಶಾಲೆಗೆ ರವಾನಿಸಲಾಗಿದೆ.
ಒಂಟೆಗಳನ್ನು ರಕ್ಷಣೆ ಮಾಡಿದ್ದ ಪೊಲೀಸರು ರಸ್ತೆಯುದ್ದಕ್ಕೂ ಅದನ್ನು ಹಿಡಿದು ನಡೆದುಕೊಂಡೇ ಕೈವಾರ ಪೊಲೀಸ್ ಹೊರ ಠಾಣೆಗೆ ಹೆಜ್ಜೆ ಹಾಕಿದ್ದಾರೆ. ಇನ್ನು ಸ್ಥಳೀಯ ಸಾರ್ವಜನಿಕರು ಒಂಟೆಗಳನ್ನು ನೋಡಲು ಮುಗಿಬಿದ್ದಿದ್ದರು.