ಚಿಕ್ಕೋಡಿ: ಪ್ರೌಢಶಾಲಾ ಅತಿಥಿ ಶಿಕ್ಷಕ ಅಪಹರಿಸಿದ್ದ ವಿದ್ಯಾರ್ಥಿನಿಯನ್ನು ಯಮಕನಮರಡಿ ಪೊಲೀಸರು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿ ಶಿಕ್ಷಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಗುಟಗುದ್ದಿ ಗ್ರಾಮದ ಹೈಸ್ಕೂಲ್ ವಿದ್ಯಾರ್ಥಿನಿ ಅಪಹರಣ ಪ್ರಕರಣ ಸುಖಾಂತ್ಯಗೊಂಡಿದ್ದು, ಖಾನಾಪೂರ ತಾಲೂಕಿನ ಕಾಟಗಳ್ಳಿ ಗ್ರಾಮದಲ್ಲಿ ಅಪಹರಣಗೊಂಡಿದ್ದ 9ನೇ ತರಗತಿ ವಿದ್ಯಾರ್ಥಿ ಆರತಿ(ಹೆಸರು ಬದಲಾಯಿಸಲಾಗಿದೆ)ಯನ್ನು ಪೊಲೀಸರು ರಕ್ಷಿಸಿದ್ದಾರೆ. ಅಲ್ಲದೇ ಅಪಹರಣ ಮಾಡಿದ್ದ ಅತಿಥಿ ಶಿಕ್ಷಕ ಸಿದ್ರಾಯ ಲಕ್ಷ್ಮಣ ನಿಂಗರಾಯಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಏನಿದು ಪ್ರಕರಣ?
ಗುಟಗುದ್ದಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಅತಿಥಿ ಶಿಕ್ಷಕನಾಗಿದ್ದ ಸಿದ್ರಾಯ ಲಕ್ಷ್ಮಣ ನಿಂಗರಾಯಿ (34), ಅದೇ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಆರತಿಯನ್ನು ಅಕ್ಟೋಬರ್ 30 ರಂದು ಕಿಡ್ನಾಪ್ ಮಾಡಿದ್ದ. ಈ ಸಂಬಂಧ ವಿದ್ಯಾರ್ಥಿನಿ ತಂದೆ ಪೊಲೀಸರಿಗೆ ದೂರು ನೀಡಿದ್ದರು.
ದೂರಿನಲ್ಲಿ ಏನಿತ್ತು?
ಅಕ್ಟೋಬರ್ 30 ರಂದು ನನ್ನ ಮಗಳು ಶಾಲೆಯಲ್ಲಿ ಪರೀಕ್ಷೆ ಇದೆ ಎಂದು ಹೇಳಿ ಹೋಗಿದ್ದು, ಸಂಜೆಯಾದವರೂ ವಾಪಸ್ ಬರಲಿಲ್ಲ. ಬಳಿಕ ನಾನು ಗ್ರಾಮದ ಸುತ್ತಮುತ್ತ ಮತ್ತು ಸಂಬಂಧಿಕರ ಮನೆಗೆ ಹೋಗಿ ಹುಡುಕಿದೆವು. ಆದರೆ ನನ್ನ ಮಗಳು ಎಲ್ಲೂ ಪತ್ತೆಯಾಗಿಲ್ಲ. ಬಳಿಕ ನಮ್ಮ ಊರಿನ ಜನರು ಸಿದ್ರಾಮ ಲಕ್ಷ್ಮಣ ನಿಂಗರಾಯ ಜೊತೆಗೆ ಬೇರೆ ಊರಿಗೆ ಹೋಗುತ್ತಿದ್ದನ್ನು ನೋಡಿರುವುದಾಗಿ ಹೇಳಿದ್ದರು. ಈ ಬಗ್ಗೆ ತಿಳಿದ ತಕ್ಷಣ ಆತನ ಮನೆಗೆ ಹೋಗಿ ವಿಚಾರಿಸಿದೆ. ಆದರೆ ಆತ ಮನೆಯಲ್ಲಿ ಇರಲಿಲ್ಲ. ಸಿದ್ರಾಮ ನನ್ನ ಮಗಳ ಜೊತೆ ಪ್ರೀತಿಯ ನಾಟಕವಾಡಿ, ಮನೆ ಬಿಟ್ಟು ಬರುವಂತೆ ಆಕೆಯ ತಲೆ ಕೆಡಿಸಿ ಅಪಹರಿಸಿಕೊಂಡು ಹೋಗಿದ್ದಾನೆ. ದಯವಿಟ್ಟು ನನ್ನ ಮಗಳನ್ನು ಹುಡುಕಿಕೊಡಿ ಎಂದು ವಿದ್ಯಾರ್ಥಿನಿಯ ತಂದೆ ಯಮಕನಮರಡಿ ಪೊಲೀಸರಿಗೆ ದೂರು ಕೊಟ್ಟಿದ್ದರು.
ಪತ್ತೆಯಾಗಿದ್ದು ಹೇಗೆ?
ಪೊಲೀಸರು ವಿದ್ಯಾರ್ಥಿನಿ ಅಪಹರಣ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ವಿದ್ಯಾರ್ಥಿನಿ ತಂದೆಯ ದೂರಿನ ಹಿನ್ನೆಲೆಯಲ್ಲಿ, ಅತಿಥಿ ಶಿಕ್ಷಕ ಸಿದ್ರಾಯಿ ಸಂಬಂಧಿಕರು ಹಾಗೂ ಸ್ನೇಹಿತರನ್ನು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಸಿದ್ರಾಯಿಯ ಫೋನ್ ನಂಬರ್ ಚೆಕ್ ಮಾಡಿದ್ದಾರೆ. ಟವರ್ ಪರಿಶೀಲನೆ ವೇಳೆ ಲೋಕೇಶನ್ ಖಾನಾಪೂರ ತಾಲೂಕಿನ ಕಾಟಗಳ್ಳಿ ಗ್ರಾಮದಲ್ಲಿರುವುದು ತಿಳಿದು ಬಂದಿದೆ. ಕೂಡಲೇ ಎಚ್ಚೆತ್ತ ಪೊಲೀಸರು ಕಾಟಹಳ್ಳಿ ಗ್ರಾಮಕ್ಕೆ ತೆರಳಿ, ವಿದ್ಯಾರ್ಥಿನಿಯನ್ನು ರಕ್ಷಿಸಿದ್ದಾರೆ. ಅಲ್ಲದೇ ಆರೋಪಿ ಶಿಕ್ಷಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv