– ಮೊದಲ ಮಹಡಿಯಲ್ಲೇ 100 ಕೋಟಿ ಹಳೇ, ಹೊಸ ನೋಟು ಪತ್ತೆ- ಬೆಚ್ಚಿಬಿದ್ದ ಪೊಲೀಸರು
ಬೆಂಗಳೂರು: ಮಾಜಿ ರೌಡಿ ಶೀಟರ್ ನಾಗರಾಜ್ ಅಲಿಯಾಸ್ ನಾಗನ ಮನೆ ಮೇಲೆ ಪೊಲೀಸರು ಇಂದು ಬೆಳಿಗ್ಗೆ ದಾಳಿ ನಡೆಸಿದ್ದಾರೆ. ಶ್ರೀರಾಮಪುರದ ನಿವಾಸದ ಮೇಲೆ ಹೆಣ್ಣೂರು ಪೊಲೀಸರು ದಾಳಿ ಮಾಡ್ತಿದ್ದಂತೆ ನಾಗ ಮನೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದು, ಮನೆ ಬಾಗಿಲು ತೆಗೆಸಲು ಬೆಳಗ್ಗಿನಿಂದ ಪೊಲೀಸರು ಪ್ರಯತ್ನಿಸುತ್ತಿದ್ದರು. ಆದ್ರೆ ಈಗ ನಾಗ ಪರಾರಿಯಾಗಿದ್ದಾನೆ ಎಂದು ಹೇಳಲಾಗ್ತಿದೆ.
ಅಕ್ರಮ ಶಸ್ತ್ರಾಸ್ತ್ರ ಇಟ್ಟುಕೊಂಡಿದ್ದ ಆರೋಪದಡಿ ಪೊಲೀಸರು ನಾಗನನ್ನು ಬಂಧಿಸಲು ಹೋಗಿದ್ದರು. ಮಾರ್ಚ್ 18ರಂದು ರಿಯಲ್ ಎಸ್ಟೇಟ್ ಉದ್ಯಮಿ ಉಮೇಶ್ ಎಂಬುವರನ್ನ ಅಪಹರಿಸಲಾಗಿತ್ತು. ಕಿಡ್ನ್ಯಾಪ್ ತಂಡ ಶ್ರೀರಾಮಪುರದ ನಾಗನ ಮನೆಗೆ ಉಮೇಶ್‍ರನ್ನ ಕರೆತಂದು 50 ಲಕ್ಷ ರೂ. ಹಣ ವಸೂಲಿ ಮಾಡಿದ್ರು. ಕೊಲೆ ಬೆದರಿಕೆ ಇದ್ದ ಕಾರಣ ಉದ್ಯಮಿ ಉಮೇಶ್ ಯಾವುದೇ ದೂರು ನೀಡಿರಲಿಲ್ಲ. ನಂತರ ಏಪ್ರಿಲ್ 07 ರಂದು ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಉಮೇಶ್ ದೂರು ದಾಖಲಿಸಿದ್ರು. ಹೀಗಾಗಿ ಕೋರ್ಟ್‍ನಿಂದ ಸರ್ಚ್ ವಾರೆಂಟ್ ತಂದು ಹೆಣ್ಣೂರು ಇನ್ಸ್ ಪೆಕ್ಟರ್ ಶ್ರೀನಿವಾಸ್, ಮಲ್ಲೇಶ್ವರಂ ಎಸಿಪಿ ಸೇರಿದಂತೆ 40 ಕ್ಕೂ ಹೆಚ್ಚು ಪೊಲೀಸರು ನಾಗನ ಮನೆ ಹಾಗೂ ಸ್ನೇಹ ಸೇವಾ ಸಮಿತಿ ಕಚೇರಿಯ ಮೇಲೆ ದಾಳಿ ಮಾಡಿದ್ದಾರೆ.
Advertisement
Advertisement
ಬೆಳಗ್ಗೆ 7 ಗಂಟೆಗೆ ಪೊಲೀಸರು ಬಂದಿರೋ ವಿಚಾರ ತಿಳಿದ ನಾಗ, ಮನೆ ಹಾಗೂ ಕಚೇರಿ ಲಾಕ್ ಮಾಡಿಕೊಂಡಿದ್ದಾನೆ. ಸುತ್ತಿಗೆಯಿಂದ ಕೀ ಹಾಗೂ ಮನೆಯ ಮುಂದಿನ ಗ್ರಿಲ್ ಕಂಬಿಗಳನ್ನು ಒಡೆದು ಪೊಲೀಸರು ಒಳ ಪ್ರವೇಶಿಸಿದ್ದಾರೆ. ಪೊಲೀಸರು ದಾಳಿ ನಡೆಸಿದ ವೇಳೆ ನಾಗನ ಮನೆಯಲ್ಲಿ 100 ಕೋಟಿ ರೂಪಾಯಿಗೂ ಹೆಚ್ಚು ಹಳೆಯ ಮತ್ತು ಹೊಸ ನೋಟುಗಳು ಪತ್ತೆಯಾಗಿವೆ. ಅಲ್ಲದೆ ಲಾಂಗು, ಕತ್ತಿ, ಡ್ಯಾಗರ್ ಸೇರಿದಂತೆ ಹಲವು ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ. ಇದುವರೆಗೂ ಪೊಲೀಸರು 4 ಮಹಡಿಯನ್ನ ಶೋಧಿಸಿದ್ದು, 5ನೇ ಮಹಡಿಯಿಂದ ಟೆರೆಸ್‍ಗೆ ಹೋಗಿ ಅಲ್ಲಿಂದ ಬಾಂಬ್ ನಾಗ ಎಸ್ಕೇಪ್ ಆಗಿದ್ದಾನೆ ಎನ್ನಲಾಗಿದೆ.
Advertisement
ಸಿಸಿಟಿವಿ ನೋಡ್ತಾ ಪೊಲೀಸರ ಕಣ್ತಪ್ಪಿಸಿ ಎಸ್ಕೇಪ್: ಕಂಪ್ಯೂಟರೈಸ್ಡ್ ಲಾಕ್ ಇರುವ ಕಟ್ಟಡದ ಕೊನೆ ಅಂತಸ್ತಿನಲ್ಲಿ ನಾಗ ಅವಿತು ಕುಳಿತಿದ್ದು, ಕೊಠಡಿಯಲ್ಲೇ ಕುಳಿತು ಸಿಸಿಟಿವಿ ದೃಶ್ಯಾವಳಿ ಮೂಲಕ ಪೊಲೀಸರ ತಪಾಸಣೆಯನ್ನು ವೀಕ್ಷಿಸುತ್ತಿದ್ದ ಎನ್ನಲಾಗಿತ್ತು. ಆದ್ರೆ ಮನೆಯ ಟೆರೆಸ್ ಮೂಲಕ ಎಸ್ಕೇಪ್ ಆಗಿರುವ ಶಂಕೆ ವ್ಯಕ್ತವಾಗಿದೆ. ಬಾಗಿಲು ಒಡೆದು ಒಳಹೋದಾಗ ಇದ್ದದ್ದು ಪತ್ನಿ ಮಾತ್ರ.
Advertisement
ಬ್ಲಾಕ್ ಅಂಡ್ ವೈಟ್ ಮನಿ ದಂಧೆಯಲ್ಲಿ ತೊಡಗಿದ್ದ ಬಾಂಬ್ ನಾಗ 8 ಉದ್ಯಮಿಗಳನ್ನು ಕಿಡ್ನ್ಯಾಪ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ಹಣ ಬದಲಾವಣೆ ಮಾಡಿಕೊಡುವುದಾಗಿ ನಂಬಿಸಿ ಉದ್ಯಮಿಗಳಿಗೆ ವಂಚಿಸಿದ್ದು, ಉದ್ಯಮಿಗಳನ್ನು ಕರೆತಂದು ಹಣ ವಸೂಲಿ ಮಾಡುತ್ತಿದ್ದ ಎನ್ನಲಾಗಿದೆ. ಆದರೆ ಹೆಣ್ಣೂರು ಠಾಣೆಯಲ್ಲಿ ಮಾತ್ರ ಉಮೇಶ್ ಅವರ ಅಪಹರಣದ ಕುರಿತು 1 ದೂರು ದಾಖಲಾಗಿತ್ತು.
ಬಾಂಬ್ ನಾಗ ಎಂದು ಹೆಸರು ಬಂದಿದ್ದೇಗೆ?: ಶ್ರೀರಾಮಪುರದ ಅರುಣಾ ಥಿಯೇಟರ್ ಬಳಿ ರೌಡಿಶೀಟರ್ ರಾಜೇಂದ್ರ ಎಂಬಾತ ನಾಗರಾಜನ ಮೇಲೆ ದಾಳಿ ಮಾಡಿದ್ದ. ನಾಗರಾಜನ ಮೇಲೆ ಬಾಂಬ್ ದಾಳಿ ನಡೆದಿತ್ತು. ಅಂದಿನಿಂದ ನಾಗರಾಜನಿಗೆ ಬಾಂಬ್ ನಾಗ ಎಂದು ಹೆಸರು ಬಂದಿದೆ. ಈತ 20ನೇ ವಯಸ್ಸಿಗೆ ರೌಡಿಸಂಗೆ ಕಾಲಿಟ್ಟಿದ್ದ. ದರೋಡೆ, ಬೆದರಿಕೆ, ಹಲ್ಲೆ, ಕಿಡ್ನ್ಯಾಪ್, ಕೊಲೆ ಯತ್ನ ಸೇರಿದಂತೆ ಬಾಂಬ್ ನಾಗನ ಮೇಲೆ 32 ಪ್ರಕರಣ ದಾಖಲಾಗಿದ್ದವು. ನೆಲಮಂಗಲ, ಶ್ರೀರಾಮಪುರ, ಹೆಣ್ಣೂರು ಠಾಣೆ ಸೇರಿದಂತೆ ಸಿಸಿಬಿಯಲ್ಲೂ ಬಾಂಬ್ ನಾಗನ ವಿರುದ್ಧ ದೂರು ದಾಖಲಾಗಿತ್ತು. ಇವುಗಳಲ್ಲಿ ಬಹುತೇಕ ಪ್ರಕರಣಗಳು ಖುಲಾಸೆಯಾಗಿದೆ. ಇತ್ತೀಚೆಗೆ ರೌಡಿಶೀಟರ್ ಪಟ್ಟಿಯಿಂದ ಹೆಸರು ಕೈಬಿಡುವಂತೆ ಕೋರ್ಟ್ ಆದೇಶ ನೀಡಿತ್ತು.