ಉಡುಪಿ: ನಿಗೂಢವಾಗಿ ಸಾವನ್ನಪ್ಪಿದ ಶಿರೂರು ಸ್ವಾಮೀಜಿ ಗಳಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದ ಮಹಿಳೆ ವಿಚಾರಣೆ ನಡೆಸಲಾಗುತ್ತಿದೆ. ಶಿರೂರು ಶ್ರೀಗಳ ಆಭರಣಗಳು ಮಹಿಳೆಯ ಮೈಮೇಲೆ ಕಂಡುಬಂದಿದ್ದು ಹಲವು ಅನುಮಾನಗಳಿಗೆ ಎಡಮಾಡಿಕೊಟ್ಟಿದೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮೂಲದ ರಮ್ಯಾ ಶೆಟ್ಟಿ ಎಂಬ ಮಹಿಳೆ ಶ್ರೀ ಗಳಿಗೆ ಊಟ ವ್ಯವಸ್ಥೆ ಮಾಡುತ್ತಿದ್ದರು. ರಮ್ಯಾರನ್ನು ಬ್ರಹ್ಮಾವರದ ವ್ಯಕ್ತಯೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಆದ್ರೆ ರಮ್ಯಾ ಮಣಿಪಾಲದಲ್ಲಿ ಮನೆ ಮಾಡಿಕೊಂಡು ವಾಸವಾಗಿದ್ದರು. ಪ್ರತಿ ನಿತ್ಯ ತಾಯಿ ಜೊತೆ ಶಿರೂರು ಮೂಲ ಮಠಕ್ಕೆ ಆಗಮಿಸುತ್ತಿದ್ದ ರಮ್ಯಾ ಶ್ರೀಗಳಿಗೆ ಉಟ ತೆಗೆದುಕೊಂಡು ಬರುತ್ತಿದ್ದರು. ಹಲವು ಬಾರಿ ಮಠದಲ್ಲಿಯೇ ತಂಗುತ್ತಿದ್ದರೂ ಎಂದು ಹೇಳಲಾಗುತ್ತಿದೆ.
ರಮ್ಯಾ ಶೆಟ್ಟಿ, ಇತ್ತೀಚೆಗೆ ಮೂಲಮಠದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಳು ಎಂಬ ಮಾಹಿತಿ ಮಠದ ಮೂಲಗಳಿಂದ ಲಭಿಸಿದ್ದು, ಪ್ರತಿ ಸೋಮವಾರ ಕೆಲಸಗಾರರಿಗೆ ಸಂಬಳವನ್ನು ರಮ್ಯಾ ನೀಡುತ್ತಿದ್ರು. ಶ್ರೀ ಗಳಿಗೆ ರಮ್ಯಾ ಹೇಗೆ ಆಪ್ತೆಯಾದಳು? ಶ್ರೀಗಳಿಗೆ ನೀಡುತ್ತಿದ್ದ ಆಹಾರದ ಪಟ್ಟಿ ಎಂಬುದರ ಬಗ್ಗೆ ಪೊಲೀಸರು ರಮ್ಯಾರಿಂದ ಮಾಹಿತಿ ಪಡೆಯುತ್ತಿದ್ದಾರೆ. ಸ್ವಾಮೀಜಿಗೆ ಭಕ್ತರಿಂದ ಉಡುಗೊರೆಯಾಗಿ ಬಂದಿದ್ದ ಚಿನ್ನಾಭರಣ ಮಹಿಳೆ ಮೈಮೇಲೆ ಇರುವುದು ಈಗ ಚರ್ಚೆಗೆ ಕಾರಣವಾಗಿದೆ. ಶಿರೂರು ಶ್ರೀ ತೊಡುತ್ತಿದ್ದ ಚಿನ್ನದ ಐದು ಕಡಗಗಳ ಪೈಕಿ ಒಂದನ್ನು ರಮ್ಯಾ ತೊಟ್ಟು ಫೋಟೋ ತೆಗೆಸಿಕೊಂಡಿದ್ದಾರೆ. ರಮ್ಯಾ ಶೆಟ್ಟಿ ಮೈ ಮೇಲೆ ಶಿರೂರು ಸ್ವಾಮೀಜಿ ಕಡಗ, ಸರ ಇರುವುದರಿಂದ ರಮ್ಯಾ ಯಾಕಿಷ್ಟು ಆತ್ಮೀಯಳು ಎಂಬ ಪ್ರಶ್ನೆಯೂ ಎದ್ದಿದೆ.
ಪೇಜಾವರಶ್ರೀ ಪತ್ರಿಕಾಗೋಷ್ಠಿಯಲ್ಲಿ, ಶಿರೂರು ಶ್ರೀಗಳು ಮಹಿಳೆ ಜೊತೆ ಸಂಪರ್ಕ ಇರುವುದಾಗಿ ಹೇಳಿಕೆ ನೀಡಿದ್ದಾರೆ. ಸ್ವಾಮೀಜಿ ಹೇಳಿದ್ದ ಮಹಿಳೆ ಇವರೇನಾ? ಎಂಬುದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ.