ಚಿತ್ರದುರ್ಗ: ಹಾಡಹಗಲೇ ಹೈವೆ ಪಕ್ಕ ಐರನ್ ಸ್ಮಗ್ಲಿಂಗ್ (Iron Smuggling) ದಂಧೆ ನಡೆಸುತ್ತಿದ್ದ ವೇಳೆ ದಾವಣಗೆರೆ ಐಜಿ ಸ್ಕ್ವಾಡ್ ದಾಳಿ ನಡೆಸಿ ಆರು ಜನರನ್ನು ಬಂಧಿಸಿದ್ದು, 12 ಲಕ್ಷ ಮೌಲ್ಯದ ಕಬ್ಬಿಣ ರಾಡ್ ವಶಕ್ಕೆ ಪಡೆದುಕೊಂಡಿರುವ ಪ್ರಕರಣ ಚಿತ್ರದುರ್ಗ (Chitradurga) ಜಿಲ್ಲೆಯ ಮೊಳಕಾಲ್ಮೂರು (Molakalmuru) ತಾಲ್ಲೂಕಿನ ಬೈರಾಪುರ ಗ್ರಾಮದ ಬಳಿ ಬೆಳಕಿಗೆ ಬಂದಿದೆ.
ದಾಳಿಯಲ್ಲಿ ಕಾಂಗ್ರೆಸ್ ಮುಖಂಡ ತಮ್ಮಣ್ಣ ಸೇರಿ ಒಟ್ಟು ಆರು ಮಂದಿಯನ್ನ ಪೊಲೀಸರು ಬಂಧಿಸಿದ್ದಾರೆ. ಕಾಂಗ್ರೆಸ್ ಮುಖಂಡ ತಮ್ಮಣ್ಣ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದು, ಪ್ರತಿ ಹಬ್ಬಗಳ ಆಚರಣೆಯ ವೇಳೆಯಲ್ಲಿ ಕಾಂಗ್ರೆಸ್ ಮುಖಂಡರೊಂದಿಗೆ ಈತನ ಫ್ಲೆಕ್ಸ್‌ಗಳು ರಾರಾಜಿಸುತ್ತಿದ್ದವು. ರಾಜಕಾರಣದ ಬಲದಿಂದ ಅಕ್ರಮವಾಗಿ ಕಬ್ಬಿಣ ದಂಧೆಯಲ್ಲಿ ತೊಡಗಿದ್ದ ಈತನ ಜಾಲವನ್ನು ಪೊಲೀಸರು ಇಂದು ಪತ್ತೆ ಹಚ್ಚಿದ್ದಾರೆ. ಇದನ್ನೂ ಓದಿ: ತುಮಕೂರು| ಜಯಮಂಗಲಿ ನದಿಯಲ್ಲಿ ಈಜಲು ತೆರಳಿದ್ದ ಬಾಲಕ ನೀರಿನಲ್ಲಿ ಮುಳುಗಿ ಸಾವು
ಈ ದಾಳಿಯಲ್ಲಿ 20 ಟನ್ ತೂಕದ ಕಬ್ಬಿಣ ಹಾಗೂ ಮೂರು ಲಾರಿ ವಶಕ್ಕೆ ಪಡೆಯಲಾಗಿದೆ. ದಾವಣಗೆರೆ ಪೂರ್ವವಲಯ ಐಜಿ ರವಿಕಾಂತೇ ಗೌಡ ಮತ್ತು ಚಿತ್ರದುರ್ಗ ಎಸ್ಪಿ ರಂಜಿತ್ ಕುಮಾರ್ ಬಂಡಾರು ಮಾರ್ಗದರ್ಶನದಲ್ಲಿ ದಾಳಿ ನಡೆಸಲಾಗಿದ್ದು, ಜಿಂದಾಲ್ ಐರನ್ ಫ್ಯಾಕ್ಟರಿಗಳಿಂದ ಬೆಂಗಳೂರು ಕಡೆ ಹೋಗುತ್ತಿದ್ದ ಲಾರಿಗಳ ಚಾಲಕರ ಜೊತೆ ಕಾಂಗ್ರೆಸ್ ಮುಖಂಡ ತಮ್ಮಣ್ಣ ಡೀಲ್ ಕುದುರಿಸಿ ಅಕ್ರಮವಾಗಿ ಐರನ್ ದಂಧೆ ನಡೆಸುತ್ತಿದ್ದರು ಎನ್ನಲಾಗಿದೆ. ಇದನ್ನೂ ಓದಿ: 6-7 ಸಾವಿರ ಕೋಟಿ ತೆರಿಗೆ ಜಾಸ್ತಿ ಮಾಡಿರೋದು ನಿಜ – ಗ್ಯಾರಂಟಿಗಳಿಗೆ ಸುಮ್ಮನೆ ಹಣ ಬರುತ್ತಾ?: ಸಿಎಂ
ಪ್ರಕರಣದ ಎ1 ಆರೋಪಿ ಬೈರಾಪುರ ಗ್ರಾಮದ ತಮ್ಮಣ್ಣ, ಮತ್ತು ಹರೀಶ್, ತಿಪ್ಪೇಸ್ವಾಮಿ, ಗಿರಿಸಿದ್ದಪ್ಪ, ಪರಶುರಾಮ್, ಯರ್ರಿಸ್ವಾಮಿ ಸೇರಿದಂತೆ ಒಟ್ಟು ಆರು ಮಂದಿಯನ್ನು ಬಂಧಿಸಲಾಗಿದೆ. ಐಜಿ ಸ್ಕ್ವಾಡ್ ಪಿಎಸ್‌ಐ ಮೋಹನ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಈ ಬಗ್ಗೆ ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಒತ್ತುವರಿ ಮಾಡಿಲ್ಲ ಎಂದಾದರೆ ಕುಮಾರಸ್ವಾಮಿ ಏಕೆ ಗಾಬರಿಯಾಗಬೇಕು: ಡಿ.ಕೆ.ಶಿವಕುಮಾರ್ ಪ್ರಶ್ನೆ