ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಒನ್ ವೇನಲ್ಲಿ ಹೋಗೋ ವಾಹನ ಸವಾರರೇ ಹುಷಾರ್. ಯಾಕೆಂದರೆ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡುವ ವಾಹನ ಸವಾರರಿಗೆ ಚುರುಕು ಮುಟ್ಟಿಸಲು ಟ್ರಾಫಿಕ್ ಪೊಲೀಸರು ಮುಂದಾಗಿದ್ದಾರೆ.
ಒನ್ ವೇನಲ್ಲಿ ಇನ್ಮುಂದೆ ವಾಹನ ಸವಾರರು ಹೋದರೆ ಡ್ರಂಕನ್ ಡ್ರೈವ್ ನಷ್ಟೇ ದಂಡದ ಜೊತೆ ಲೈಸೆನ್ಸ್ ಕೂಡ ರದ್ದು ಮಾಡಲು ಟ್ರಾಫಿಕ್ ಇಲಾಖೆ ನಿರ್ಧಾರ ಕೈಗೊಂಡಿದೆ. ಒನ್‍ವೇಗಳಲ್ಲಿ ವಾಹನ ಓಡಿಸುವುದರಿಂದ ಹೆಚ್ಚಾಗಿ ಅಪಘಾತವಾಗುತ್ತದೆ. ಹೀಗಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ವಾಹನ ಸವಾರರು ನಿಯಮ ಪಾಲಿಸುವಂತೆ ಸೂಚಿಸಿದರೂ ಸಹ ಪದೇ ಪದೇ ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ. ಹೀಗಾಗಿ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ರು ಎಡ ಮತ್ತು ಬಲ ಪಥ ಸೂಚನಾ ಮಾರ್ಗ ಬದಲಾಯಿಸಿ ವಾಹನ ಓಡಿಸುವವರ ವಿರುದ್ಧ ಅತಿವೇಗ ಮತ್ತು ಸೆಕ್ಷನ್ 188 ಅಜಾಗೂರಕತೆ ಆರೋಪದಡಿ ಪ್ರಕರಣ ದಾಖಲು ಮಾಡುತ್ತಾರೆ.
188 ಸೆಕ್ಷನ್ ಪ್ರಕರಣಗಳಲ್ಲಿ ವಾಹನ ಹಾಗೂ ಚಾಲನಾ ಪರವಾನಗಿ ವಶಕ್ಕೆ ಪಡೆದಾಗ ನ್ಯಾಯಾಲಯದ ದಂಡ ಪಾವತಿಸಿ ಬಳಿಕ ವಾಹನಗಳನ್ನು ಬಿಡುಗಡೆ ಮಾಡಬೇಕಾಗುತ್ತೆ. ಮೊದಲು ಒನ್ ವೇ ರಸ್ತೆಗಳಲ್ಲಿ ವಾಹನ ಚಲಾಯಿಸಿದರೆ 500 ದಂಡ ವಿಧಿಸಲಾಗುತ್ತಿತ್ತು. ದಂಡ ಅಧಿಕವಾದರೂ ಒನ್ ವೇಗಳಲ್ಲಿ ವಾಹನಗಳ ಸಂಚಾರ ಬಿಟ್ಟಿಲ್ಲ. ಹೀಗಾಗಿ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಈ ನಿರ್ಧಾರ ಕೈಗೊಂಡಿದ್ದಾರೆ.