– 3 ದಿನಗಳ ಕಾಲ ಪ್ರವಾಸಿಗರ ಆಗಮನಕ್ಕೆ ನಿಷೇಧ
ಚಿಕ್ಕಮಗಳೂರು: ದತ್ತಜಯಂತಿ ಆಚರಣೆ ಹಿನ್ನೆಲೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಹೈ-ಅಲರ್ಟ್ ಘೋಷಿಸಲಾಗಿದೆ. ಜಿಲ್ಲಾದ್ಯಂತ 35 ಚೆಕ್ ಪೋಸ್ಟ್, 48 ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳು, 800ಕ್ಕೂ ಅಧಿಕ ಕ್ಯಾಮೆರಾ ಹಾಗೂ 5 ಸಾವಿರಕ್ಕಿಂತಲೂ ಅಧಿಕ ಪೊಲೀಸರು ಕಾಫಿನಾಡಲ್ಲಿ ಹದ್ದಿನ ಕಣ್ಣಿಟ್ಟಿದ್ದಾರೆ.
ವಿಶ್ವಹಿಂದೂ ಪರಿಷದ್ ಹಾಗೂ ಬಜರಂಗದಳ ನೇತೃತ್ವದಲ್ಲಿ ಡಿಸೆಂಬರ್ 10 ರಿಂದ 12ರವರೆಗೆ ಮೂರು ದಿನಗಳ ಕಾಲ ನಡೆಯುವ ದತ್ತಜಯಂತಿಗೆ ಜಿಲ್ಲಾಡಳಿತ ಜಿಲ್ಲಾದ್ಯಂತ ಸರ್ಪಗಾವಲನ್ನು ಹಾಕಿದೆ. ಡಿಸೆಂಬರ್ 10 ರಿಂದ 12ರವರೆಗೆ ಮೂರು ದಿನಗಳ ಕಾಲ ಜಿಲ್ಲಾದ್ಯಂತ ಮದ್ಯ ಮಾರಾಟವನ್ನ ನಿಷೇಧಿಸಿಸಲಾಗಿದೆ.
Advertisement
Advertisement
ನಿಷೇಧ: ಡಿ.12 ರಂದು ಚಿಕ್ಕಮಗಳೂರಿನ ಕೆ.ಎಂ.ರಸ್ತೆ, ಐ.ಜಿ. ರಸ್ತೆ, ಬಸವನಹಳ್ಳಿ ಮುಖ್ಯರಸ್ತೆ ಸೇರಿದಂತೆ ಆಲ್ದೂರು ಪಟ್ಟಣ, ಹಾಂದಿಯಿಂದ ವಸ್ತಾರೆವರೆಗೆ ಅಂಗಡಿ-ಮುಂಗಟ್ಟುಗಳನ್ನ ಮುಚ್ಚುವಂತೆ ಆದೇಶಿಸಲಾಗಿದೆ. ಡಿ. 10 ರಿಂದ 12ರವರೆಗೆ ಮುಳ್ಳಯ್ಯನಗಿರಿ, ಸೀತಾಳಯ್ಯನಿಗಿರಿ, ದತ್ತಪೀಠ, ಗಾಳಿಕೆರೆ, ಮಾಣಿಕ್ಯಾಧಾರಕ್ಕೆ ಪ್ರವಾಸಿಗರನ್ನು ಸಂಪೂರ್ಣ ನಿಷೇಧಿಸಿದ್ದಾರೆ.
Advertisement
ಡಿ.10 ರಂದು ಅನಸೂಯ ಜಯಂತಿ. ನಗರದಲ್ಲಿ ಸಾವಿರಾರು ಮಹಿಳೆಯರು ಮೆರವಣಿಗೆ ನಡೆಸಿ ದತ್ತಪೀಠದಲ್ಲಿ ಪೂಜೆ-ಹೋಮ-ಹವನ ನಡೆಸಲಿದ್ದಾರೆ. ಡಿ.11 ರಂದು ನಗರದಲ್ಲಿ 10 ಸಾವಿರಕ್ಕೂ ಅಧಿಕ ದತ್ತಭಕ್ತರು ಬೃಹತ್ ಶೋಭಾಯಾತ್ರೆ ನಡೆಸಲಿದ್ದಾರೆ. ಡಿ.12 ರಂದು ರಾಜ್ಯಾದ್ಯಂತ ಬರಲಿರೋ 20 ಸಾವಿರಕ್ಕೂ ಅಧಿಕ ದತ್ತಭಕ್ತರು ದತ್ತಪೀಠಕ್ಕೆ ತೆರಳಿ ದತ್ತಪಾದುಕೆ ದರ್ಶನ ಪಡೆದು ದತ್ತಪೀಠದಲ್ಲಿ ಹೋಮ-ಹವನ ನಡೆಸಲಿದ್ದಾರೆ. ಮೂರು ದಿನಗಳ ಕಾಲ ಜಿಲ್ಲಾದ್ಯಂತ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಕೂಡ ಹೈ-ಅಲರ್ಟ್ ಘೋಷಿಸಿದೆ. ಜಿಲ್ಲಾದ್ಯಂತ 5 ಸಾವಿರಕ್ಕೂ ಅಧಿಕ ಪೊಲೀಸರನ್ನು ಬಂದೋಬಸ್ತ್ ಗೆ ನಿಯೋಜಿಸಲಾಗಿದ್ದು, ಇಂದು ನಗರದ ಪ್ರಮುಖ ಬೀದಿಗಳಲ್ಲಿ ಮೂರು ಸಾವಿರಕ್ಕೂ ಅಧಿಕ ಪೊಲೀಸರು ಪಥಸಂಚಲನ ನಡೆಸಿದರು.