Chamarajanagar
ಅಪಘಾತದಲ್ಲಿ ಗಾಯಗೊಂಡವರಿಂದ್ಲೇ 2 ಸಾವಿರ ರೂ. ಲಂಚ ಪಡೆದ ಪೊಲೀಸರು!

ಚಾಮರಾಜನಗರ: ಅಪಘಾತವಾಗಿ ಗಾಯಗೊಂಡವರಿಂದಲೇ 2 ಸಾವಿರ ರೂ. ಪಡೆಯುವ ಮೂಲಕ ಪೊಲೀಸರು ಮಾನವೀಯತೆಯನ್ನು ಮರೆತ ಘಟನೆಯೊಂದು ನಡೆದಿದೆ.
ಈ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೊಕಿನ ಲೊಕ್ಕನಹಳ್ಳಿ ಸಮೀಪ ನಡೆದಿದೆ. ಮರಳು ಸಾಗಿಸುತ್ತಿದ್ದ ವೇಳೆ ಟ್ರ್ಯಾಕ್ಟರ್ ಪಲ್ಟಿಯಾಗಿ ಚಾಲಕ ಸೇರಿದಂತೆ ಇಬ್ಬರು ಗಾಯಗೊಂಡಿದ್ದರು. ವಿಷಯ ತಿಳಿದ ಹನೂರು ಠಾಣೆಯ ಎಎಸ್‍ಐ ತೋಂಟದಾರ್ಯ ಹಾಗೂ ಮುಖ್ಯಪೇದೆ ಚಂದ್ರು ಗಾಯಾಳುಗಳನ್ನು ಸಕಾಲಕ್ಕೆ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸುವ ಬದಲು ಅವರಿಂದಲೇ 2 ಸಾವಿರ ರೂ. ಲಂಚ ಪಡೆದು ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಈ ವಿಷಯ ತಿಳಿದ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಹನೂರು ಠಾಣೆ ಎದುರು ಜಮಾಯಿಸಿ ಪೊಲೀಸರ ವರ್ತನೆ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ಬಳಿಕ ಎಚ್ಚೆತ್ತ ಎಎಸ್‍ಐ ತೋಂಟದಾರ್ಯ ಹಾಗೂ ಮುಖ್ಯಪೇದೆ ಚಂದ್ರು ಎರಡು ಸಾವಿರ ಲಂಚದ ಹಣ ಹಿಂತಿರುಗಿಸಿ ಕ್ಷಮೆ ಕೇಳಿದ್ದಾರೆ.
