ಮುಂಬೈ: ಅತೃಪ್ತ ಶಾಸಕರನ್ನು ಭೇಟಿ ಮಾಡಲು ಬಂದಿದ್ದ ನನ್ನನ್ನು ಮುಂಬೈ ಪೊಲೀಸರು ಬಲವಂತವಾಗಿ ಹೊರ ಹಾಕಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿಗೆ ಬರುವ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾವು ನಮ್ಮ ಶಾಸಕರನ್ನು ಭೇಟಿ ಮಾಡಲು ಬಂದಿದ್ದೆವು. ಅಲ್ಲಿದ್ದ ಶಾಸಕರೂ ಸಹ ಕರೆ ಮಾಡಿ ದಯವಿಟ್ಟು ನೀವು ಬರಬೇಕು ಎಂದು ಮನವಿ ಮಾಡಿದ್ದರು. ಈ ಹಿನ್ನೆಲೆ ಹೋಟೆಲ್ ರೂಂ ಬುಕ್ ಮಾಡಿಕೊಂಡು ಶಾಸಕರಾದ ಜಿ.ಟಿ.ದೇವೇಗೌಡ, ಬಾಲಕೃಷ್ಣ ಹಾಗೂ ಶಿವಲಿಂಗೇ ಗೌಡ ಅವರೊಂದಿಗೆ ಆಗಮಿಸಿದ್ದೆವು. ಆದರೆ ಪೊಲೀಸರು 144 ಸೆಕ್ಷನ್ ಜಾರಿ ಮಾಡಿ ತಡೆದರು ಎಂದು ಆರೋಪಿಸಿದರು.
Advertisement
Advertisement
ಹೋಟೆಲ್ ಬಳಿ ಬಂದಾಗ ಸಿಬ್ಬಂದಿ ರೂಂ ಕೀ ಸಹ ತಂದುಕೊಟ್ಟಿದ್ದರು. ನಂತರ ಇಲ್ಲ ನಿಮ್ಮ ರಿಸರ್ವೇಶನ್ ಕ್ಯಾನ್ಸಲ್ ಮಾಡಿದ್ದೇವೆ ಎಂದು ಹೋಟೆಲ್ ಮ್ಯಾನೇಜ್‍ಮೆಂಟ್‍ನವರು ಹೇಳಿದರು. ನಾವು ಕಾನೂನು ಬಾಹಿರವಾಗಿ ಬಂದಿರಲಿಲ್ಲ. ನಾಲ್ಕೇ ಜನ ಬಂದಿದ್ದೇವು. ಐದಾರು ಗಂಟೆಗಳ ನಂತರ ನನ್ನನ್ನು ಈ ಗೆಸ್ಟ್ ಹೌಸ್‍ಗೆ ಕರೆ ತಂದಿದ್ದರು. ಇದೀಗ ನನ್ನನ್ನು ಹೊರ ಹಾಕಿದ್ದಾರೆ. ಆದರೆ, ನಾನು ಇಲ್ಲೇ ಇರಬೇಕು, ಏನೇ ಆದರೂ ಅವರನ್ನು ಭೇಟಿ ಮಾಡಿಯೇ ಹೋಗಬೇಕೆಂದು ನಿರ್ಧರಿಸಿದ್ದೆ ಎಂದರು.
Advertisement
ಪೊಲೀಸರು ನನಗೆ ಮುಂಬೈನಿಂದ ನೀವು ಹೋಗಬೇಕು, ವಿಮಾನ ನಿಲ್ದಾಣದವರೆಗೆ ನಿಮ್ಮನ್ನು ಬಿಡಲೇಬೇಕೆಂದು ನಮಗೆ ಆದೇಶವಿದೆ ಎಂದು ಹೇಳಿದ್ದಾರೆ. ಇದು ಪ್ರಜಾಪ್ರಭುತ್ವದ ವಿರೋಧಿ ನೀತಿ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಅಧಿಕಾರಿಗಳು ಈ ರೀತಿ ದುರ್ನಡತೆ ತೋರುತ್ತಿರುವುದನ್ನು ಖಂಡಿಸುತ್ತೇನೆ ಎಂದು ಹೇಳಿದರು.
Advertisement
ಬಿಜೆಪಿಯವರು ನಮ್ಮದೇನು ಕೈವಾಡ ಇಲ್ಲ ಎಂದು ಹೇಳುತ್ತಾರೆ. ಆದರೆ ಹೋಟೆಲ್ ಒಳಗಡೆ ಬಿಜೆಪಿಯವರಿದ್ದಾರೆ. ನಮ್ಮ ಮಿತ್ರರು ಬರುತ್ತಾರೆಂದು ಈಗಲೂ ನನಗೆ ನಂಬಿಕೆ ಇದೆ. ಕಾಂಗ್ರೆಸ್-ಜೆಡಿಎಸ್ ಸರ್ಕಾರವನ್ನು ಉಳಿಸಿಕೊಳ್ಳುತ್ತಾರೆ. ಎಲ್ಲ ನೋವನ್ನು ಮರೆತು ಚರ್ಚೆ ಮಾಡಿ ಒಗ್ಗಟ್ಟಿನಿಂದ ಇರುತ್ತೇವೆ ಎಂದರು.
ನನ್ನನ್ನು ಮುಂಬೈಯಿಂದ ಹೊರಗಡೆ ಹಾಕಿದ್ದಾರೆ. ಬೆಳಗಿನಿಂದಲೂ ಮುಂಬೈನ ಎಲ್ಲ ಪಕ್ಷದ ಮುಖಂಡರು ಒಟ್ಟಿಗೆ ಬಂದು ನಮಗೆ ಪ್ರೋತ್ಸಾಹ ನೀಡಿದ್ದಾರೆ. ಅಲ್ಲದೆ, ನಮ್ಮ ಪಕ್ಷದ ಕಾರ್ಯಕರ್ತರು ಸೈನ್ಯದ ರೀತಿ ನಿಂತು ಹೋರಾಟ ನಡೆಸಿದ್ದಾರೆ ಎಂದು ಹೇಳಿದರು.
ಬೆಳಗ್ಗಿನಿಂದ ರಿನೈಸನ್ಸ್ ಹೋಟೆಲ್ ಮುಂದೆ ಅತೃಪ್ತರ ಭೇಟಿಗಾಗಿ ಕಾದು ಕುಳಿತಿದ್ದ ಸಚಿವ ಡಿಕೆ ಶಿವಕುಮಾರ್ ಅವರನ್ನು ಮುಂಬೈ ಪೊಲೀಸರು 6 ಗಂಟೆಯ ಹೈಡ್ರಾಮದ ಬಳಿಕ ವಶಕ್ಕೆ ಪಡೆದಿದ್ದರು. ನಂತರ ಸಂಜೆ 6.30ರ ವೇಳೆಗೆ ಪೊಲೀಸರು ಡಿ.ಕೆ.ಶಿವಕುಮಾರ್ ಅವರನ್ನು ಭದ್ರತೆಯಲ್ಲಿ ಮುಂಬೈ ವಿಮಾನ ನಿಲ್ದಾಣದವರೆಗೆ ಕರೆ ತಂದು ವಿಮಾನದ ಮೂಲಕ ಬೆಂಗಳೂರಿಗೆ ಕಳುಹಿಸಿದರು.
10 ಗಂಟೆಗಳ ಡ್ರಾಮಾ:
ಬಿಜೆಪಿ ಮುಖಂಡರಿಬ್ಬರು ಮಂಗಳವಾರ ರಾತ್ರಿ ಅತೃಪ್ತ ಶಾಸಕರನ್ನು ಭೇಟಿಯಾದ ಬೆನ್ನಲ್ಲೇ ಇಂದು ಸಚಿವ ಡಿಕೆ ಶಿವಕುಮಾರ್, ಜಿ.ಟಿ ದೇವೇಗೌಡ ಹಾಗೂ ಶಾಸಕ ಶಿವಲಿಂಗೇ ಗೌಡ ಅವರು ಮುಂಬೈಗೆ ತೆರಳಿದ್ದರು. ಮುಂಬೈಗೆ ಬರುವ ಮಾಹಿತಿ ಬೆನ್ನಲ್ಲೇ ಅಲ್ಲಿನ ಪೊಲೀಸ್ ಅಲರ್ಟ್ ಆಗಿದ್ದು, ಹೋಟೆಲ್ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಿ 144 ಸೆಕ್ಷನ್ ಹಾಕಿದ್ದರು. ಹೀಗಾಗಿ ಹೋಟೆಲ್ ಬಳಿ ಬಂದರೂ ಡಿಕೆಶಿಗೆ ಒಳಗಡೆ ಹೋಗಲು ಸಾಧ್ಯವಾಗಿರಲಿಲ್ಲ.
ಹೋಟೆಲ್ ಒಳಗಡೆ ಹೋಗಲು ಪೊಲೀಸರು ನಿರಾಕರಿಸುತ್ತಿದ್ದಂತೆಯೇ ಡಿಕೆಶಿ ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ನಾವು ಒಂದೇ ಕುಟುಂಬದವರು. ನಮ್ಮ ಮಧ್ಯೆ ಸ್ವಲ್ಪ ಸಮಸ್ಯೆ ಆಗಿದೆ. ಅದನ್ನು ನಾವು ಸರಿಪಡಿಸಲು ಬಂದಿದ್ದೇವೆಯೇ ಹೊರತು, ಬೆದರಿಕೆ ಹಾಕಲು ಬಂದಿಲ್ಲ. ನಿನ್ನೆ ಬಿಜೆಪಿಯವರನ್ನು ಬಿಟ್ಟಿದ್ದೀರಿ, ಇವತ್ತು ನಮ್ಮವರನ್ನು ಭೇಟಿ ಮಾಡಲು ಯಾಕೆ ಅವಕಾಶ ನೀಡುತ್ತಿಲ್ಲ ಎಂದು ಪ್ರಶ್ನಿಸುವ ಮೂಲಕ ಸಚಿವರು ಮನವಿ ಮಾಡಿಕೊಂಡರೂ ಪೊಲೀಸರು ಒಪ್ಪಿರಲಿಲ್ಲ. ಹೀಗಾಗಿ ಇಬ್ಬರು ಮುಖಂಡರೊಂದಿಗೆ ಡಿಕೆಶಿ ಹೋಟೆಲ್ ಹೊರಗಡೆಯೇ ಕಾದು ಕುಳಿತಿದ್ದರು. ಕೊನೆಗೆ ಹೋಟೆಲ್ ಸಿಬ್ಬಂದಿ ಡಿಕೆಶಿ ಹಠಕ್ಕೆ ಮಣಿದು ರೂಮ್ ಕೊಡಲು ನಿರ್ಧಾರ ಮಾಡಿದ್ದರು.
ಹೋಟೆಲ್ ಸಿಬ್ಬಂದಿ ಮತ್ತು ಪೊಲೀಸರು ನಡುವೆ ಮಾತುಕತೆ ನಡೆದಿತ್ತು, ಡಿ.ಕೆ.ಶಿವಕುಮಾರ್ ಅವರಿಗೆ ಹೋಟೆಲ್‍ನಲ್ಲಿ ರೂಮ್ ಕೊಡಲು ಒಪ್ಪಿಗೆ ನೀಡಲಾಗಿತ್ತು. ಆದರೆ ಅತೃಪ್ತ ಶಾಸಕರ ತಂಗಿರುವ ಬಿಲ್ಡಿಂಗ್ ಬಿಟ್ಟು ಬೇರೆ ಬಿಲ್ಡಿಂಗ್‍ನಲ್ಲಿ ಡಿಕೆಶಿಗೆ ರೂಮ್ ಕೊಡಲು ಸಿಬ್ಬಂದಿ ಒಪ್ಪಿಗೆ ಸೂಚಿಸಿದ್ದರು. ನನಗೆ ಶಾಸಕರು ಇರುವ ಬಿಲ್ಡಿಂಗ್‍ನಲ್ಲೇ ರೂಮ್ ಬೇಕು ಎಂದು ಹೋಟೆಲ್ ಸಿಬ್ಬಂದಿ ಬಳಿ ಶಿವಕುಮಾರ್ ಬಿಗಿ ಪಟ್ಟು ಹಿಡಿದಿದ್ದರು. ಪೊಲೀಸರು ಮತ್ತು ಸಿಬ್ಬಂದಿ ಡಿಕೆಶಿ ಅವರ ಮನವೊಲಿಸಲು ಪ್ರಯತ್ನ ಮಾಡಿದ್ದರು. ಆದರೂ ಡಿಕೆಶಿ ತನ್ನ ಪಟ್ಟು ಬಿಡದ ಹಿನ್ನೆಲೆಯಲ್ಲಿ ಪೊಲೀಸರು ನಿಷೇಧಾಜ್ಞೆ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದರು.