ಬಾಗಲಕೋಟೆ: ರಸ್ತೆ ನಿಯಮವನ್ನು ಪಾಲಿಸಿದ್ದರೂ ಲಂಚಬಾಕ ಪೊಲೀಸ್ ಅಧಿಕಾರಿಯೊಬ್ಬ ಚಾಲಕನಿಗೆ ಕಾಡಿಬೇಡಿ, ಬೈದು 100 ರೂ. ಪಡೆದಿರುವ ವಿಡಿಯೋ ಹಾಗೂ ಆಡಿಯೋ ಬಾಗಲಕೋಟೆ ಜಿಲ್ಲೆಯಲ್ಲಿ ಸದ್ಯ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.
ಜಿಲ್ಲೆಯ ಜಮಖಂಡಿ ಗ್ರಾಮೀಣ ಠಾಣೆ ಎಎಸ್‍ಐ ಮಾರುತಿ ಭಜಂತ್ರಿ ಎಂಬವರೇ ಲಂಚ ಪಡೆದ ಅಧಿಕಾರಿ. ಜಮಖಂಡಿಯಿಂದ ಮಹಾಲಿಂಗಪುರಕ್ಕೆ ಚಾಲಕ ಖಾಲಿ ವಾಹನ ತೆಗೆದುಕೊಂಡು ಹೋಗುವಾಗ ರಸ್ತೆ ನಿಯಮ ಹಾಗೂ ದಾಖಲೆಗಳಿದ್ದರೂ 200 ರೂ. ದಂಡ ಕೊಡು ಎಂದು ಅಧಿಕಾರಿ ಬೈದಿದ್ದಾರೆ.
Advertisement
Advertisement
ನನ್ನ ಬಳಿ 100 ರೂ. ಬಿಟ್ಟರೆ ಬೇರೆ ಇರಲಿಲ್ಲ. ಕೊನೆಗೆ ಅದನ್ನು ಕೊಟ್ಟು ಬಂದೆ. ನಾನೇನು ತಪ್ಪು ಮಾಡಿರದಿದ್ದರೂ 100 ರೂ. ದಂಡ ಕೊಟ್ಟು ಬಂದಿದ್ದೇನೆ. ಪೊಲೀಸರಿಗೆ ಚಾಲಕರೆಂದರೆ ಕಿಮ್ಮತ್ತೇ ಇಲ್ಲ. ನಮಗೆ ಬಾಯಿಗೆ ಬಂದಂತೆ ಬೈತಾರೆ. ಬೆಳಗ್ಗೆಯಿಂದ ಸಂಜೆವರೆಗೂ ದುಡಿದು ಆ ಪೊಲೀಸರಿಗೆ ಹಣ ಕೊಟ್ಟು ಬರಿಗೈಲಿ ಬಂದೆ. ಒಂದು ವರ್ಷದ ಮಗನಿಗೆ ಸ್ವೀಟ್ ತೆಗೆದುಕೊಂಡು ಹೋಗಲು ಇಟ್ಟುಕೊಂಡಿದ್ದ 100 ರೂ. ಕಿತ್ತುಕೊಂಡರು. ಮಗನಿಗೆ ಸ್ವೀಟ್ ಇಲ್ಲದೆ ಮನೆಗೆ ತೆರಳಿದೆ ಎಂದು ಚಾಲಕ ತನ್ನ ದುಃಖವನ್ನು ತೋಡಿಕೊಂಡಿರುವ ಆಡಿಯೋ ಇದೀಗ ಜಿಲ್ಲೆಯಲ್ಲಿ ಫುಲ್ ವೈರಲ್ ಆಗಿದೆ.
Advertisement
ಸದ್ಯ ಲಂಚಬಾಕ ಎಎಸ್‍ಐ ವಿರುದ್ಧ ಚಾಲಕ ಕಿಡಿಕಾರಿದ್ದಾನೆ. ತಾನು ಕೆರೂರ ಪಟ್ಟಣದ ವಾಹನ ಚಾಲಕ ಎಂದು ಆಡಿಯೋದಲ್ಲಿ ಹೇಳಿದ್ದಾನೆ. ಜೊತೆಗೆ ಎಎಸ್‍ಐ ನೂರು ರೂ. ಪಡೆದು ಬೈದು ಕಳುಹಿಸಿರುವ ವಿಡಿಯೋ ಸಹ ವೈರಲ್ ಮಾಡಿದ್ದಾನೆ.