ಮಂಗಳೂರು: ಬಿಜೆಪಿ ಶಾಸಕ ಹರೀಶ್ ಪೂಂಜಾ (Harish Poonja) ಬಂಧನಕ್ಕೆ ಪೊಲೀಸರು ಮುಂದಾಗಿದ್ದು, ಬೆಳ್ತಂಗಡಿಯಲ್ಲಿ (Belthangady) ಇಡೀ ದಿನ ಭಾರೀ ಹೈಡ್ರಾಮಾ ನಡೆಯಿತು.
ಇವತ್ತು ಬೆಳಗ್ಗೆಯೇ ಹರೀಶ್ ಪೂಂಜಾ ಬಂಧಿಸಲು ಪೊಲೀಸರು ಅವರ ಗರ್ಡಾಡಿಯ ಮನೆಗೆ ಬಂದಿದ್ದರು. ಹರೀಶ್ ಪೂಂಜಾ ಮಾತ್ರ ನಾನು ಬರುವುದಿಲ್ಲ ಎಂದು ಹೇಳಿದರು. ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿದ ಕಾರಣ ಭಾರೀ ಸಂಖ್ಯೆಯಲ್ಲಿ ಪೊಲೀಸರು ಸಹ ಆಗಮಿಸಿದ್ದರು. ಇನ್ನೊಂದು ಕಡೆ ವಕೀಲರು ಸಹ ಮನೆಗೆ ಆಗಮಿಸಿದರು.
ವಿಷಯ ತಿಳಿದ ಪೂಂಜಾ ಬೆಂಬಲಿಗರು ಭಾರೀ ಸಂಖ್ಯೆಯಲ್ಲಿ ಸೇರಿದರು. ಸಂಸದ ನಳಿನ್ ಕುಮಾರ್ ಕಟೀಲ್ (Nalin Kumar Kateel) ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟಾ (Brijesh Chauta) ಸೇರಿ ಹಲವರು ಆಗಮಿಸಿದರು. ಯಾವುದೇ ಕಾರಣಕ್ಕೂ ಪೂಂಜಾ ಬಂಧಿಸಬಾರದು. ಪೊಲೀಸರು ವಾಪಸ್ ಹೋಗ್ಬೇಕು ಎಂದು ಬಿಜೆಪಿ ಕಾರ್ಯಕರ್ತರು ಪಟ್ಟು ಹಿಡಿದರು.
ಉದ್ದೇಶಪೂರ್ವಕವಾಗಿ ಪೂಂಜಾರನ್ನು ಜೈಲಿಗೆ ಕಳಿಸುವ ಷಡ್ಯಂತ್ರ ನಡೆದಿದೆ ಎಂದು ಆಕ್ರೋಶ ಹೊರಹಾಕಿದರು. ಶಾಸಕರು ಏನೋ ಉದ್ವೇಗದಿಂದ ಮಾತಾಡಿದ್ದಾರೆ. ಆದರೆ ದುರುದ್ದೇಶದಿಂದ ಕೂಡಿಲ್ಲ. ಇದನ್ನೇ ನೆಪ ಮಾಡಿಕೊಂಡು ಶಾಸಕರ ಬಂಧನಕ್ಕೆ ಮುಂದಾಗಿರೋದು ಸರಿಯಲ್ಲ. ಮುಂದೆ ಆಗುವ ಅನಾಹುತಗಳಿಗೆ ಪೊಲೀಸರೇ ಹೊಣೆ ಆಗ್ತಾರೆ ಎಂದು ಬಿಜೆಪಿ ಎಚ್ಚರಿಕೆ ನೀಡಿತ್ತು.
ಪ್ರತಿಭಟನೆ ಜೋರಾಗುತ್ತಿದ್ದಂತೆ ಪೊಲೀಸರು ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿ ಹರೀಶ್ ಪೂಂಜಾ ಅವರಿಗೆ ನೋಟಿಸ್ ಜಾರಿ ಮಾಡಿ ತೆರಳಿದರು.
ಅನುಮತಿ ಪಡೆಯದೇ ಪ್ರತಿಭಟನೆ (Protest) ನಡೆಸಿ ಬೆಳ್ತಂಗಡಿ ಪೊಲೀಸರಿಗೆ ಬೆದರಿಕೆ ಅರೋಪದ ಮೇಲೆ ಹರೀಶ್ ಪೂಂಜಾ ವಿರುದ್ಧ ಕೇಸ್ ದಾಖಲಾಗಿತ್ತು. ಅರೆಸ್ಟ್ ಆಗಿರುವ ಕಾರ್ಯಕರ್ತರಿಗಾಗಿ ಪೊಲೀಸರ ಕಾಲರ್ ಹಿಡಿಯಲು ಸಿದ್ದ ಬೆಂಗಳೂರಿನ ಡಿ.ಜೆ ಹಳ್ಳಿ, ಕೆ.ಜೆ ಹಳ್ಳಿಯ ಪೊಲೀಸ್ ಠಾಣೆಗೆ ಆದ ಗತಿಯನ್ನು ಬೆಳ್ತಂಗಡಿ ಠಾಣೆಗೂ ಕಾಣಿಸ್ತೇನೆ ಎಂದು ಹರೀಶ್ ಪೂಂಜಾ ಬೆದರಿಕೆ ಹಾಕಿದ್ದರು.
ಈ ಸಂಬಂಧ ಬೆಳ್ತಂಗಡಿ ಬಿಜೆಪಿ ಶಾಸಕರ ವಿರುದ್ಧ ಐಪಿಸಿ 143, 147, 341, 504, 506 ಜೊತೆಗೆ 149 ಸೆಕ್ಷನ್‌ಗಳ ಅಡಿ ಒಟ್ಟು ಎರಡು ಕೇಸ್ ದಾಖಲಾಗಿತ್ತು.