ಚಿಕ್ಕಮಗಳೂರು: ಅಕ್ರಮ ಮರಳು ಗಣಿಗಾರಿಕೆಯ ಅಡ್ಡೆ ಮೇಲೆ ದಾಳಿ ಮಾಡಲು ಮುಂದಾದಾಗ ಪೊಲೀಸರ ಮೇಲೆ ಲಾರಿ ಹತ್ನಿಸಲು ಮರಳು ದಂಧೆಕೋರರು ಯತ್ನಿಸಿದ್ದಾರೆ.
ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿಯ ತಲಗೂರು ವ್ಯಾಪ್ತಿಯಲ್ಲಿ ಹೇಮಾವತಿ ನದಿ ಒಡಲಲ್ಲಿ ಮರಳುಗಾರಿಕೆ ನಡೆಯುತ್ತಿದ್ದ ಜಾಗಕ್ಕೆ ಪೊಲೀಸರು ರೇಡ್ ಮಾಡಿದ್ದಾರೆ. ಆಗ ಮರುಳುಗಾರಿಕೆ ಮಾಡುತ್ತಿದ್ದ ಮೊಹಿನುದ್ದಿನ್ ಎಂಬವನು ಪೊಲೀಸರ ಮೇಲೆ ಲಾರಿ ಹತ್ತಿಸಲು ಯತ್ನಿಸಿದ್ದನು. ಆಗ ಪೊಲೀಸರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು. ಈ ಘಟನೆ ಬಳಿಕ ಆತ ಕೂಡ ಅಂದಿನಿಂದ ನಾಪತ್ತೆಯಾಗಿದ್ದಾನೆ.
ಅಂದಿನಿಂದ ವಿಷಯವನ್ನು ಗೌಪ್ಯವಾಗಿಟ್ಟಿದ್ದ ಪೊಲೀಸರು ಸೋಮವಾರ ಸುಮಾರು ನೂರಕ್ಕೂ ಅಧಿಕ ಪೊಲೀಸರು ತಲಗೂರು ಗ್ರಾಮಕ್ಕೆ ನುಗ್ಗಿದ್ದಾರೆ. ಓರ್ವ ಮರಳು ದಂಧೆಕೋರನನ್ನು ಹಿಡಿಯಲು ಐವರು ಸಬ್ ಇನ್ಸ್ ಪೆಕ್ಟರ್, ಐವರು ಸರ್ಕಲ್ ಇನ್ಸ್ ಪೆಕ್ಟರ್, ಒಂದು ನಕ್ಸಲ್ ನಿಗ್ರಹ ಪಡೆ ತುಕಡಿ, ಒಂದು ಓಬವ್ವ ತುಕಡಿ ಹಾಗೂ ಒಂದು ಸಶಸ್ತ್ರ ಮೀಸಲ ಪಡೆಯ ತುಕಡಿಯ ನೂರಕ್ಕೂ ಅಧಿಕ ಪೊಲೀಸರು ಹೋಗಿದ್ದಾರೆ. ಪೊಲೀಸರು ಹೀಗೆ ಏಕಾಏಕಿ ನುಗ್ಗುವುದು ಕಂಡು ಗ್ರಾಮಸ್ಥರು ಆತಂಕಕ್ಕೀಡಾಗಿದ್ದರು.
ನೂರಕ್ಕೂ ಅಧಿಕ ಪೊಲೀಸರು ಗ್ರಾಮದ ಸುತ್ತಲೂ ನಾಕಾಬಂಧಿ ರಚಿಸಿ ಬೆಳಗ್ಗೆಯಿಂದ ಸಂಜೆವರೆಗೂ ಹುಡುಕಾಡಿದ್ದಾರೆ. ಆದರೆ ಆರೋಪಿಯ ಸುಳಿವು ಪತ್ತೆಯಾಗಿಲ್ಲ. ಬಳಿಕ ಆರೋಪಿಗೆ ಸೇರಿದ ಎರಡು ಟೆಂಪೋ, ಎರಡು ಬೈಕ್ ಹಾಗೂ ಎರಡು ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.