ಚಿಕ್ಕಮಗಳೂರು: ರೈತ (Farmers) ಹೋರಾಟಗಾರರ ಮೇಲೆ ಪೊಲೀಸರು ಲಾಠಿ ಚಾರ್ಜ್(Lathi Charge) ಮಾಡಿದ್ದನ್ನು ಖಂಡಿಸಿ ಮಲೆನಾಡು ಹಿತರಕ್ಷಣಾ ವೇದಿಕೆ ಸೋಮವಾರ ಶೃಂಗೇರಿ ಬಂದ್‌ಗೆ(Sringeri Bandh) ಕರೆ ನೀಡಿದೆ.
ಮಲೆನಾಡು ನಾಗರೀಕ ಹಿತರಕ್ಷಣಾ ವೇದಿಕೆ ಕೊಪ್ಪ, ಶೃಂಗೇರಿ ಹಾಗೂ ಎನ್ ಆರ್.ಪುರ ಮೂರು ತಾಲೂಕಿನಲ್ಲಿ ಸ್ವಯಂಪ್ರೇರಿತ ಬಂದ್‌ಗೆ ಕರೆ ನೀಡಿದೆ. ಶೃಂಗೇರಿಯ ಬಂದ್‌ಗೆ ಬಿಜೆಪಿ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ಹೇಳಿದ್ದಾರೆ
ಬಂದ್ ಯಾಕೆ?
ಕಾಫಿನಾಡು ಭಾಗದಲ್ಲಿ ಕಾಡಾನೆಗಳ(Wild Elephant) ಉಪಟಳ ಮಿತಿ ಮೀರಿದೆ. ಕೆಲ ದಿನಗಳ ಹಿಂದಷ್ಟೇ ಕಾಫಿತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾಡಾನೆ ದಾಳಿಗೆ ಕಾರ್ಮಿಕ ಯಲ್ಲಪ್ಪ ಎಂಬುವರು ಬಲಿಯಾಗಿದ್ದರು. ಈ ಘಟನೆ ನಡೆದು ವಾರದಲ್ಲೇ ಕಾಡಾನೆ ದಾಳಿಗೆ ಇನ್ನೊಂದು ಜೀವ ಬಲಿಯಾಗಿದೆ.
ಹೊಸಪೇಟೆ ಮೂಲದ 34 ವರ್ಷದ ಬೋರಮ್ಮ ಕಾಡಾನೆ ದಾಳಿಯಿಂದ ಮೃತಪಟ್ಟಿದ್ದಾರೆ. ಏಳು ದಿನಗಳ ಅಂತರದಲ್ಲಿ ಎರಡನೇ ಬಲಿ ಸಂಭವಿಸಿರುವುದು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ. ಚಿಕ್ಕಮಗಳೂರು ತಾಲೂಕಿನ ಕಡಬಗೆರೆ ಗ್ರಾಮದಲ್ಲಿ ಮಹಿಳೆಯ ಮೃತದೇಹ ಸಾಗಿಸುತ್ತಿದ್ದ ವಾಹನ ತಡೆದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆ ಮಧ್ಯೆ ಶವವಿಟ್ಟು ಪ್ರತಿಭಟನೆ ನಡೆಸಿದ ನೂರಾರು ಗ್ರಾಮಸ್ಥರು, ಸಂತ್ರಸ್ತೆ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದರು. ಈ ವೇಳೆ ಶಾಸಕ ರಾಜೇಗೌಡ ಸ್ಥಳಕ್ಕೆ ಬಂದಾಗ ಬಿಜೆಪಿ ಕಾರ್ಯಕರ್ತನ ಮೇಲೆ ಕೈ ಎತ್ತಿದ್ರು ಅಂತ ಆರೋಪಿಸಿ ಪ್ರತಿಭಟನಾಕಾರರು ಶಾಸಕರನ್ನು ತಳ್ಳಾಡಿ ಸಿಟ್ಟು ಹೊರಹಾಕಿದರು. ಇದನ್ನೂ ಓದಿ: ಇಬ್ಬರನ್ನು ಬಲಿ ಪಡೆದಿದ್ದ ಕಾಡಾನೆ ಸೆರೆ – ಹೈರಾಣಾದ ಸಾಕಾನೆಗಳು!
ಬಿಗುವಿನ ವಾತಾವರಣ ಉಂಟಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಡಿಸಿ-ಎಸ್ಪಿ ಇಬ್ಬರೂ ಬರಬೇಕಾಯ್ತು. ಪ್ರತಿಭಟನಾಕಾರರು ಆಂಬುಲೆನ್ಸ್, ಪೊಲೀಸ್ ಜೀಪಿಗೆ ತಡೆಯೊಡ್ಡಿ ಬಂದು ಮೃತದೇಹ ರವಾನೆಗೆ ಅಡ್ಡಿಪಡಿಸಿದರು. ಅಷ್ಟೇ ಅಲ್ಲದೇ ಕಲ್ಲು ತೂರಾಟ ನಡಿಸಿ ಪೊಲೀಸ್ ವ್ಯಾನ್ ಅನ್ನೇ ತಳ್ಳಾಡಿದ್ರು.
ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸ್ರು ಲಾಠಿ ಪ್ರಯೋಗ ಮಾಡಿದ್ರು. ಪ್ರತಿಭಟನೆ ನಡೆಸಿದ ಮಾಜಿ ಸಚಿವ ಜೀವರಾಜ್, ಜೆಡಿಎಸ್ ಮುಖಂಡ ಸುಧಾಕರ್ ಶೆಟ್ಟಿ ಸೇರಿ 30ಕ್ಕೂ ಹೆಚ್ಚು ಜನರನ್ನ ಪೊಲೀಸರು ವಶಕ್ಕೆ ಪಡೆದರು.
ಇಷ್ಟೆಲ್ಲಾ ಬೆಳವಣಿಗೆಗಳ ಮಧ್ಯೆ ಏಳು ಕುಮ್ಕಿ ಆನೆಗಳ ಸಹಾಯದಿಂದ 75 ಅರಣ್ಯ ಸಿಬ್ಬಂದಿ ಮಹಿಳೆ ಮೇಲೆ ದಾಳಿ ನಡೆಸಿದ್ದ ಕಾಡಾನೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಸಾರ್ವಜನಿಕರು ಮಾತ್ರ ದಾಳಿ ಮಾಡಿದ ಆನೆಯೇ ಬೇರೆ ಸೆರೆ ಹಿಡಿದ ಆನೆಯೇ ಬೇರೆ ಎಂದು ಆರೋಪಿಸಿದ್ದಾರೆ.

