ಪಾಟ್ನಾ: 70ನೇ ಸಂಯೋಜಿತ ಸ್ಪರ್ಧಾತ್ಮಕ ಪರೀಕ್ಷೆಯ (CCE) ಮರುಪರೀಕ್ಷೆಗೆ ಒತ್ತಾಯಿಸಿ ಬಿಹಾರ ಲೋಕಸೇವಾ ಆಯೋಗದ (BPSC) ಆಕಾಂಕ್ಷಿಗಳು ನಡೆಸುತ್ತಿರುವ ಪ್ರತಿಭಟನೆ ಭಾನುವಾರ ಹಿಂಸಾತ್ಮಕ ರೂಪ ಪಡೆದುಕೊಂಡಿತು. ಪಾಟ್ನಾದಲ್ಲಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಪೊಲೀಸರು ಜಲಫಿರಂಗಿ ಬಳಸಿದರಲ್ಲದೇ ಲಾಠಿ ಚಾರ್ಜ್ (Police Lathi Charge) ಸಹ ನಡೆಸಿದರು.
‘नीतीश कुमार और नीतीश सरकार’ दोनों में दूरियां बढ़ती जा रही है!#SouravRajPlainPolitics #Bihar #BPSC70th pic.twitter.com/V2Wtc9Np75
— SOURAV RAJ (@souravreporter2) December 29, 2024
ಕಳೆದ ಕೆಲ ದಿನಗಳಿಂದ ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅಭ್ಯರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರು. ಭಾನುವಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ ಮಾತುಕತೆಗಾಗಿ ಅವರ ನಿವಾಸಕ್ಕೆ ತೆರಳಲು ಗಾಂಧಿ ಮೈದಾನದಲ್ಲಿ ಜಮಾಯಿಸಿದ್ದರು. ನಿತೀಶ್ ಕುಮಾರ್ ಭೇಟಿ ಸಾಧ್ಯವಿಲ್ಲ ಎಂದು ಪೊಲೀಸರು ಹೇಳಿದರು. ಆದ್ರೆ ವಿದ್ಯಾರ್ಥಿಗಳು ಸಿಎಂ ಭೇಟಿ ಮಾಡಲೇಬೇಕೆಂದು ಪಟ್ಟು ಹಿಡಿದರು. ಈ ವೇಳೆ ಬ್ಯಾರಿಕೇಡ್‌ಗಳನ್ನಿಟ್ಟು ವಿದ್ಯಾರ್ಥಿಗಳನ್ನ ತಡೆಯಲು ಮುಂದಾದರು.
ವಿದ್ಯಾರ್ಥಿಗಳು ಬ್ಯಾರಿಕೇಡ್ ಕಿತ್ತೆಸೆದು ನಿತೀಶ್ ಕುಮಾರ್ ನಿವಾಸಕ್ಕೆ ತೆರಳಲು ಮುಂದಾಗಿದ್ದರಿಂದ ಪೊಲೀಸರು ಬಲಪ್ರಯೋಗ ಮಾಡಿದರು. ಜಲಫಿರಂಗಿಗಳನ್ನು ಬಳಸಿದರಲ್ಲೇ, ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ಮಾಡಿದರು. ಈ ಕುರಿತ ವಿಡಿಯೋಗಳು ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಂತೆ ಸರ್ಕಾರದ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಪೊಲೀಸರ ಲಾಠಿ ಚಾರ್ಜ್‌ನಲ್ಲಿ ಹಲವು ಅಭ್ಯರ್ಥಿಗಳು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಜನ್ ಸೂರಜ್ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. ಅಲ್ಲದೇ ಐವರು ಸದಸ್ಯರ ವಿದ್ಯಾರ್ಥಿ ನಿಯೋಗದೊಂದಿಗೆ ಸರ್ಕಾರದ ಮುಖ್ಯಕಾರ್ಯದರ್ಶಿಗಳನ್ನ ಭೇಟಿ ಮಾಡುವುದಾಗಿ ಘೋಷಣೆ ಮಾಡಿದರು. ಸರ್ಕಾರ ಯಾವುದೇ ನಿರ್ಧಾರಕ್ಕೆ ಬರದಿದ್ದರೆ, ಮರುದಿನ ಮತ್ತೆ ಪ್ರತಿಭಟನೆ ಆರಂಭಿಸುವುದಾಗಿ ಪ್ರಶಾಂತ್ ಕಿಶೋರ್ ಎಚ್ಚರಿಕೆ ನೀಡಿದರು.
ಬಿಹಾರ ಬಂದ್‌ಗೆ ಕರೆ:
AISA ಡಿಸೆಂಬರ್ 30 ರಂದು BPSC ಮರು ಪರೀಕ್ಷೆಗೆ ಸಂಬಂಧಿಸಿದಂತೆ ಬಿಹಾರ ಬಂದ್ ಮತ್ತು ಚಕ್ಕಾ ಜಾಮ್ ಅನ್ನು ಘೋಷಿಸಿದೆ. ಸಿಪಿಐ ಕೂಡ ಈ ಆಂದೋಲನಕ್ಕೆ ಬೆಂಬಲ ಘೋಷಿಸಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಭೇಟಿ ಮಾಡಲು ಯಾವಾಗ ಮೆರವಣಿಗೆ ನಡೆಸಬೇಕು ಎಂಬುದನ್ನು ವಿದ್ಯಾರ್ಥಿಗಳೇ ನಿರ್ಧರಿಸಬೇಕು ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.