ಬಳ್ಳಾರಿ: ನಟ ಡಾಲಿ ಧನಂಜಯ್ ಅವರನ್ನು ನೋಡಲು ಬಂದ ಅಭಿಮಾನಿಗಳಿಗೆ ಪೊಲೀಸರು ಲಾಠಿ ರುಚಿ ತೋರಿಸಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಹೌದು. ಬಡವ ರಾಸ್ಕಲ್ ಚಿತ್ರದ ಪ್ರಮೋಷನ್ ಗೆಂದು ನಟ ಬಳ್ಳಾರಿಯ ನಟರಾಜ ಥಿಯೇಟರ್ ಗೆ ಆಗಮಿಸಿದ್ದರು. ಈ ವೇಳೆ ಅವರನ್ನು ನೋಡಲು ಜನ ಸಾಗರವೇ ಹರಿದುಬಂತು. ಅಲ್ಲದೆ ತಮ್ಮ ನೆಚ್ಚಿನ ನಟನ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಜನ ಮುಗಿಬಿದ್ದರು. ಮಾಸ್ಕ್, ಸಾಮಾಜಿಕ ಅಂತರ ಮರೆತು ನಟನನ್ನ ನೋಡಿ ಅಭಿಮಾನಿಗಳು ಕಣ್ಣು ತುಂಬಿಕೊಂಡರು. ನೆರೆದ ಸುಮಾರು ಸಾವಿರಕ್ಕೂ ಅಧಿಕ ಮಂದಿಯನ್ನು ನಿಯಂತ್ರಿಸಲು ಪೊಲೀಸರು ಹಾಗೂ ಥಿಯೇಟರ್ ಸಿಬ್ಬಂದಿ ಹರಸಾಹಸವೇ ಪಡಬೇಕಾಯಿತು.
ಇದೇ ವೇಳೆ ಅಭಿಮಾನಿಗಳಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ಹೊಸಪೇಟೆಯ ಪುನೀತ್ ಸರ್ಕಲ್ ಬಳಿ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಚಿತ್ರದ ಪ್ರಮೋಷನ್ ಗೂ ಮುನ್ನ ಡಾಲಿ, ಪುನೀತ್ ರಾಜ್‍ಕುಮಾರ್ ಸರ್ಕಲ್ ಗೆ ಬಂದಿದ್ದಾರೆ. ಈ ವೇಳೆಯೂ ಡಾಲಿ ನೋಡಲು ನೂಕು ನುಗ್ಗಲು ಏರ್ಪಟ್ಟಿತ್ತು. ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಲಾಠಿ ಬೀಸಿದರು. ಇದನ್ನೂ ಓದಿ: ಚಿತ್ರೀಕರಣಕ್ಕೆ ಕುಂಬಳಕಾಯಿ ಒಡೆದ ‘ಕಾಕ್ಟೈಲ್’ ಚಿತ್ರತಂಡ
ಪುನೀತ್ ರಾಜಕುಮಾರ್ ವೃತ್ತದಿಂದ ಲಕ್ಷ್ಮೀ ಟಾಕೀಸ್ ವರೆಗೆ ಅದ್ಧೂರಿ ಮೆರವಣಿಗೆ ನಡೆಯಿತು. ಓಪನ್ ಜೀಪ್ ನಲ್ಲಿ ಭರ್ಜರಿ ಮೆರವಣಿಗೆ ಮಾಡಲಾಯಿತು. ದಾರಿಯುದ್ದಕ್ಕೂ ಅಭಿಮಾನಿಗಳು ಓಡೋಡಿ ಬಂದರು. ನಂತರ ಲಕ್ಷ್ಮೀ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಣೆ ಮಾಡಿ ಡಾಲಿ ಬೆಂಗಳೂರಿನತ್ತ ಹೊರಟರು.