ರೆಸಾರ್ಟಿನಲ್ಲಿ ಕೈ ಶಾಸಕರ ಬಡಿದಾಟಕ್ಕೆ ಖಾಕಿ ಎಂಟ್ರಿ?

Public TV
2 Min Read
POLICE ANAND SINGH

ಬೆಂಗಳೂರು: ಕಾಂಗ್ರೆಸ್ ಶಾಸಕರಾದ ಆನಂದ್ ಸಿಂಗ್ ಮತ್ತು ಕಂಪ್ಲಿ ಶಾಸಕ ಗಣೇಶ್ ಇಬ್ಬರ ನಡುವಿನ ಗಲಾಟೆಗೆ ಈಗ ಪೊಲೀಸರು ಎಂಟ್ರಿ ಕೊಟ್ಟಿದ್ದು, ತನಿಖೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಈಗಲ್‍ಟನ್ ರೆಸಾರ್ಟಿನಲ್ಲಿ ಕಂಪ್ಲಿ ಶಾಸಕ ಗಣೇಶ್ ಅವರಿಂದ ಹಲ್ಲೆಗೆ ಒಳಗಾದ ಆನಂದ್ ಸಿಂಗ್ ಅವರಿಗೆ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಪೋಲೋ ಆಸ್ಪತ್ರೆ ತನ್ನ ಮೆಡಿಕೋ ಲೀಗಲ್ ಕೇಸ್(ಎಂಎಲ್‍ಸಿ) ವರದಿಯಲ್ಲಿ ಹಲ್ಲೆಯಾಗಿದೆ ಎಂದು ಉಲ್ಲೇಖಿಸಿದೆ. ಅಷ್ಟೇ ಅಲ್ಲದೇ ಆಸ್ಪತ್ರೆ ಎಂಎಲ್‍ಸಿ ವರದಿಯನ್ನು ಸ್ಥಳೀಯ ಪೊಲೀಸರಿಗೆ ನೀಡಿದೆ.

anand Ganesh Resort 1

ಆಸ್ಪತ್ರೆ ನೀಡಿರುವ ಎಂಎಲ್‍ಸಿ ವರದಿ ಹಿನ್ನೆಲೆಯಲ್ಲಿ ಹಲ್ಲೆಗೊಳಗಾದ ಶಾಸಕ ಆನಂದ್ ಸಿಂಗ್ ಅವರಿಂದ ಘಟನೆಯ ಬಗ್ಗೆ ಮಾಹಿತಿ ಸಂಗ್ರಹ ದಾಖಲಿಸಲು ಪೊಲೀಸರು ಮುಂದಾಗಿದ್ದರು. ಆದರೆ ಗಾಯಗೊಂಡಿದ್ದ ಆನಂದ್ ಸಿಂಗ್ ಆರೋಗ್ಯದಲ್ಲಿ ಇನ್ನೂ ಚೇತರಿಕೆ ಕಂಡಿರಲಿಲ್ಲ. ಹೀಗಾಗಿ ಆಸ್ಪತ್ರೆ ವೈದ್ಯರು ಆನಂದ್ ಸಿಂಗ್ ವಿಚಾರಣೆಗೆ ಅವಕಾಶ ನೀಡಲಿಲ್ಲ ಎನ್ನುವ ವಿಚಾರ ತಿಳಿದುಬಂದಿದೆ.

ಆನಂದ್ ಸಿಂಗ್ ಆರೋಗ್ಯದಲ್ಲಿ ಇನ್ನೂ ಚೇತರಿಕೆ ಕಾಣಬೇಕಿದೆ. ಆದ್ದರಿಂದ ಸದ್ಯಕ್ಕೆ ಅವರ ಬಳಿ ಯಾರನ್ನು ಬಿಡುವುದಿಲ್ಲ ಎಂದು ವೈದ್ಯರು ಪೊಲೀಸರಿಗೆ ಹೇಳಿದ್ದಾರೆ. ವೈದ್ಯರ ಸೂಚನೆಯಂತೆ ಪೊಲೀಸರು ಆನಂದ್ ಸಿಂಗ್ ಹೇಳಿಕೆ ದಾಖಲಿಸದೇ ವಾಪಸ್ಸಾಗಿದ್ದಾರೆ. ಇಂದು ಮಧ್ಯಾಹ್ನ ಮತ್ತೆ ಶಾಸಕ ಆನಂದ್ ಸಿಂಗ್ ಹೇಳಿಕೆಯನ್ನು ಪೊಲೀಸರು ಪಡೆಯವ ಸಾಧ್ಯತೆಯಿದೆ.

vlcsnap 2019 01 21 08h38m25s857

ಒಂದು ವೇಳೆ ಈ ಘಟನೆ ಬಗ್ಗೆ ಆನಂದ್ ಸಿಂಗ್ ಹೇಳಿಕೆ ದಾಖಲಿಸಿದರೆ ಕಂಪ್ಲಿ ಶಾಸಕ ಗಣೇಶ್ ಗೆ ಹೊಸ ಸಂಕಷ್ಟ ಶುರುವಾಗಲಿದೆ. ಈಗಾಗಲೇ ಎಂಎಲ್‍ಸಿ ವರದಿಯಲ್ಲಿ ಗಂಭೀರವಾಗಿ ಹಲ್ಲೆಯಾಗಿದೆ ಎಂದು ನಮೂದಿಸಲಾಗಿದೆ. ಸದ್ಯಕ್ಕೆ ಆನಂದ್ ಸಿಂಗ್ ವಿಚಾರಣೆ ಬಳಿಕ ಪೊಲೀಸರು ದೂರು ಸ್ವೀಕರಿಸಿ ಪ್ರಕರಣ ದಾಖಲಿಸುತ್ತಾರೆ. ನಂತರ ಶಾಸಕ ಗಣೇಶ್ ವಿಚಾರಣೆ ನಡೆಸುವ ಸಾಧ್ಯತೆ ಇದೆ.

ಕಾಂಗ್ರೆಸ್ ಸರ್ಕಸ್?
ಗಣೇಶ್ ವಿರುದ್ಧ ಕ್ರಮ ಕೈಗೊಳ್ಳಿ ಅಥವಾ ದೂರಿಗೆ ಅವಕಾಶ ಕೊಡಿ ಎಂದು ಆನಂದ್ ಸಿಂಗ್ ಕುಟುಂಬಸ್ಥರ ಪಟ್ಟು ಹಿಡಿದಿದ್ದಾರೆ. ಕುಟುಂಬಸ್ಥರು ಪಟ್ಟು ಹಿಡಿಯುತ್ತಿದ್ದಂತೆ ಅವರ ಮನವೊಲಿಕೆಗೆ ಕೈ ನಾಯಕರು ರಾತ್ರಿಯಿಂದ ಸರ್ಕಸ್ ಆರಂಭಿಸಿದ್ದಾರೆ. ದೂರು, ತನಿಖೆ ಎಂದು ಹೋದರೆ ಎಲ್ಲರಿಗೂ ಮುಜುಗರ ಆಗುತ್ತದೆ ಎಂದು ಹೇಳಿ ಆನಂದ್ ಸಿಂಗ್ ಜೊತೆ ಕಾಂಗ್ರೆಸ್ ನಾಯಕರು ಚರ್ಚಿಸಿದ್ದಾರೆ. ಆದರೆ ಕುಟುಂಬದವರು ದೂರು ದಾಖಲಿಸಲೇಬೇಕು. ಗಣೇಶ್ ಮೇಲೆ ಕಾನೂನು ರೀತಿಯ ಕ್ರಮಕ್ಕೆ ಆಗ್ರಹಿಸಿದ್ದಾರೆ. ಹೀಗಾಗಿ ಕುಟುಂಬದವರ ಮನವೊಲಿಸಲು ಕೈ ನಾಯಕರು ಮುಂದಾಗಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ತಿಳಿದುಬಂದಿದೆ.

https://www.youtube.com/watch?v=9xgPiNXdmxU

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *