– ಆರೋಪಿಗಳ ಬಂಧನಕ್ಕೆ ತಂಡ ರಚನೆ
ಬಳ್ಳಾರಿ: ವಿಶ್ವ ವಿಖ್ಯಾತ ಹಂಪಿಯ ಗಜ ಶಾಲೆಯ ಹಿಂಭಾಗದ ಸಾಲು ಕಂಬಗಳನ್ನ ಮೂರು ನಾಲ್ಕು ದಿನಗಳ ಹಿಂದೆ ಕಿಡಿಗೇಡಿಗಳು ಧ್ವಂಸಗೊಳಿಸಿದ್ದರು. ಕಿಡಿಗೇಡಿಗಳು ಸ್ಮಾರಕಗಳನ್ನ ಧ್ವಂಸಗೊಳಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಪೊಲೀಸರು ಹಾಗೂ ಪ್ರಾಚ್ಯ ವಸ್ತು ಹಾಗೂ ಪುರಾತತ್ವ ಸರ್ವೇಕ್ಷಣಾ ಇಲಾಖೆ ಎಚ್ಚೆತ್ತುಕೊಂಡಿದೆ.
ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ರಂಗರಾಜನ್ ಹಾಗೂ ಎಎಸ್‍ಐ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೂರು ನಾಲ್ಕು ದಿನಗಳ ಹಿಂದೆ ಉತ್ತರ ಭಾರತ ಮೂಲದ ನಾಲ್ವರು ಪ್ರವಾಸಿಗರು ಗಜಶಾಲೆಯ ಹಿಂಭಾಗದ ಸಾಲುಕಂಬಗಳನ್ನು ಕೆಡವಿ ಸ್ಮಾರಕಗಳನ್ನ ಹಾನಿ ಮಾಡಿದ್ದರು. ಇದರ ವಿಡಿಯೋವನ್ನ ಬೆಂಗಳೂರು ಮೂಲದ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು.
Advertisement
Advertisement
ಈ ಘಟನೆಯ ಬಗ್ಗೆ ಸುದ್ದಿ ಪ್ರಸಾರವಾಗುತ್ತಿದ್ದಂತೆಯೇ ಕಮಲಾಪುರ ಅಂಬೇಡ್ಕರ್ ವೃತ್ತದಲ್ಲಿ ಹಾಗೂ ಹೊಸಪೇಟೆ ಕಂಪ್ಲಿ ರಸ್ತೆಯಲ್ಲಿ ಹಂಪಿ ಗ್ರಾಮಸ್ಥರು ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದ್ದರು. ಸ್ಮಾರಕಗಳನ್ನ ಹಾನಿ ಮಾಡಿದ ಕಿಡಿಗೇಡಿಗಳನ್ನು ಬಂಧಿಸುವಂತೆ ಸ್ಥಳೀಯರು ಒತ್ತಾಯಿಸಿದ್ದು, ಇದೀಗ ಘಟನೆಯ ಬಗ್ಗೆ ಹಂಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೋಲೀಸರು ಆರೋಪಿಗಳಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.
Advertisement
ವೈರಲ್ ವೀಡಿಯೋ ಹಿನ್ನೆಲೆಯಲ್ಲಿ ಈಗಾಗಾಲೇ ತನಿಖೆ ಮಾಡಲಾಗುತ್ತಿದೆ. ನಾಲ್ವರು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಪುರಾತತ್ವ ಇಲಾಖೆ ಎರಡು ವರ್ಷದ ಹಿಂದೆ ಈ ಘಟನೆಯಾಗಿದೆ ಎನ್ನುತ್ತಿದ್ದಾರೆ. ಆರು ತಿಂಗಳ ಹಿಂದೆ ಘಟನೆ ನಡೆದಿರಬಹುದು, ಆದ್ರೆ ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಬಳ್ಳಾರಿ ಜಿಲ್ಲಾ ಎಸ್ ಪಿ ಅರುಣ್ ರಂಗರಾಜನ್ ಹೇಳಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv