ಲಕ್ನೋ: ಮಂಗಳವಾರ ಸಂಜೆ ತನಕ ಸೈಬರ್ ಕ್ರೈಂ ವಿಭಾಗದ ಇನ್ಸ್ ಪೆಕ್ಟರ್ ಕರ್ತವ್ಯದಲ್ಲಿದ್ದರು. ಆದರೆ ಮನೆಗೆ ಹೋಗಿ ಬಾಗಿಲು ತೆರೆದರೆ 7 ದಿನಗಳ ಹಿಂದೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಅಚ್ಚರಿಯ ವಿಚಾರ ಬೆಳಕಿಗೆ ಬಂದಿದೆ. ಈ ಘಟನೆ ಉತ್ತರ ಪ್ರದೇಶದ ಸಿದ್ಧಾರ್ಥನಗರ ಜಿಲ್ಲೆಯಲ್ಲಿ ನಡೆದಿದೆ.
ಪಂಕಜ್ ಶಾಹಿ ಮೃತ ಸೈಬರ್ ಕ್ರೈಂ ವಿಭಾಗದ ಇನ್ಸ್ ಪೆಕ್ಟರ್. ಇವರ ಮನೆಯಲ್ಲಿ ಕೆಟ್ಟ ವಾಸನೆ ಬರುತ್ತಿದೆ ಎಂದು ನೆರೆಹೊರೆಯವರು ಪೊಲೀಸರಿಗೆ ದೂರ ನೀಡಿದ್ದಾರೆ. ಮಾಹಿತಿ ತಿಳಿದು ಸದಾರ್ ಪೊಲೀಸರು ಮಂಗಳವಾರ ಅವರ ಮನೆಗೆ ಬಂದು ಬಾಗಿಲು ಮುರಿದು ನೋಡಿದಾಗ ಪಂಕಜ್ ಶವ ಸಿಕ್ಕಿದೆ. ಪಂಕಜ್ ಮೃತ ದೇಹ ಹಾಸಿಗೆ ಮೇಲಿತ್ತು. ಶವವನ್ನು ನೋಡಿದರೆ ಸುಮಾರು ಒಂದು ವಾರದ ಹಿಂದೆ ಪಂಕಜ್ ಮೃತಪಟ್ಟಿದ್ದಾರೆಂದು ವೈದ್ಯರು ಅನುಮಾನಿಸಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಈ ವಿಷಯ ಗೊತ್ತಾಗುತ್ತಿದ್ದಂತೆ ಕುಟುಂಬದಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ. ಆದರೆ ಒಂದು ವಾರದವರೆಗೂ ಪಂಕಜ್ ಕುಟುಂಬದವರು ಫೋನ್ ಮಾಡಿಲ್ಲವಾ ಎಂಬ ಪ್ರಶ್ನೆ ಪೊಲೀಸರಲ್ಲಿ ಮೂಡಿದೆ. ಆದರೆ ಪಂಕಜ್ ಸಹೋದರ ನಮ್ಮ ಅತ್ತಿಗೆ ಫೋನ್ ಮಾಡಿದ್ದರು. ಆದರೆ ಅಣ್ಣ ರಿಸೀವ್ ಮಾಡಿಲ್ಲ ಎಂದು ಹೇಳಿದ್ದಾರೆ.
ಸದ್ಯಕ್ಕೆ ಇದೊಂದು ಆಕಸ್ಮಿಕ ಸಾವು ಎಂದು ದೂರು ದಾಖಲಿಸಿದ್ದೇವೆ. ಮರಣೋತ್ತರ ಪರೀಕ್ಷೆಯ ನಂತರ ಪಂಕಜ್ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ. ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸ್ ಅಧಿಕಾರಿ ಸುನೀಲ್ ಸಿಂಗ್ ತಿಳಿಸಿದ್ದಾರೆ.
ಆಶ್ಚರ್ಯ ಸಂಗತಿ ಎಂದರೆ ಸೈಬರ್ ಕ್ರೈಂ ವಿಭಾಗದಲ್ಲಿ ಪಂಕಜ್ ಮಂಗಳವಾರ ಸಂಜೆಯವರೆಗೂ ಕರ್ತವ್ಯದಲ್ಲಿದ್ದರು ಎಂದು ದಾಖಲಾಗಿದೆ. ಕಚೇರಿಗೆ ಬರದೆ ಹೋದರು ಅವರು ಕರ್ತವ್ಯದಲ್ಲಿದ್ದರು ಎಂದು ಹಾಜರಿಯಲ್ಲಿ ತೋರಿಸಲಾಗಿದೆ. ಪಂಕಜ್ ಕಚೇರಿಗೆ ಬರದಿದ್ದರೂ ಅವರಿಗೆ ಯಾರು ಏಕೆ ಫೋನ್ ಮಾಡಿಲ್ಲ ಎಂಬ ಪ್ರಶ್ನೆಗೆ ಅಧಿಕಾರಿಗಳಿಂದ ಉತ್ತರವಿಲ್ಲ. ಸದ್ಯಕ್ಕೆ ಈ ಬಗ್ಗೆ ವಿಚಾರಣೆ ಶುರುವಾಗಿದೆ.