ಮಂಡ್ಯ: ಪೊಲೀಸ್ ಇನ್ಸ್‌ಪೆಕ್ಟರ್, ಬೈಕ್ ಸವಾರನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿರುವ ಘಟನೆ ಮಂಡ್ಯದಲ್ಲಿ ಜರುಗಿದೆ.
ಪೊಲೀಸ್ ಇನ್ಸ್‌ಪೆಕ್ಟರ್ ಕೃಷ್ಣಮೂರ್ತಿ ಹೆಲ್ಮೆಟ್, ಡಾಕ್ಯುಮೆಂಟ್ ಪರಿಶೀಲನೆ ಮಾಡುವ ವೇಳೆ ಬೈಕ್ ಸವಾರನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಮುಂದಾಗಿದ್ದಾರೆ.
ಏನಿದು ಘಟನೆ?
ಮಂಡ್ಯ ನಗರ ಪದೇಶದ ನಂದ ಚಿತ್ರಮಂದಿರದ ರಸ್ತೆಯಲ್ಲಿ ಬೈಕ್ ಸವಾರ ಬರುತ್ತಿದ್ದನು. ಈ ವೇಳೆ ಅದೇ ದಾರಿಯಲ್ಲಿ ಪೊಲೀಸರು ಚೆಕ್ ಮಾಡಲು ಬೈಕ್ ಸವಾರನ್ನು ತಡೆದಿದ್ದಾರೆ. ಇದಕ್ಕೆ ಪ್ರತ್ಯುತ್ತರವಾಗಿ ಬೈಕ್ ಸವಾರ ರಸ್ತೆಯ ಪಕ್ಕದಲ್ಲಿ ಬೈಕ್ ನಿಲ್ಲಿಸಿ ಪೊಲೀಸ್ ಸಿಬ್ಬಂದಿಗೆ ಯಾಕೆ ಎಂದು ಪ್ರಶ್ನೆ ಮಾಡಿದ್ದಾನೆ. ನಂತರ ಇನ್ಸ್‌ಪೆಕ್ಟರ್ ಕೃಷ್ಣಮೂರ್ತಿ ಅವರ ಬಳಿ ಹೋಗಿ ಬೈಕ್ ಸವಾರ ಮಾತಾನಾಡಿದ್ದಾನೆ.
ಈ ವೇಳೆ ಇಬ್ಬರಿಗೂ ಮಾತಿಗೆ ಮಾತು ಬೆಳೆಯಿತು. ನಂತರ ಬೈಕ್ ಸವಾರ ಪೊಲೀಸರ ಕರ್ತವ್ಯದ ಬಗ್ಗೆ ಪ್ರಶ್ನೆ ಮಾಡಿದ್ದಾನೆ. ಇದರಿಂದ ಕೋಪಗೊಂಡ ಪೊಲೀಸ್ ಇನ್ಸ್‌ಪೆಕ್ಟರ್ ಬೈಕ್ ಸವಾರನಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಹಲ್ಲೆ ಮಾಡಲು ಯತ್ನಿಸಿದ್ದಾರೆ. ನಂತರ ಬೈಕ್ ಸವಾರನನ್ನು ಪೊಲೀಸ್ ವಾಹನದಲ್ಲಿ ಕರೆದುಕೊಂಡು ಹೋಗಿದ್ದಾರೆ. ಇಷ್ಟೇಲ್ಲಾ ದೃಶ್ಯಾವಳಿಗಳು ಮೊಬೈಲ್‍ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ಈ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿರುವ ಮಂಡ್ಯ ಎಸ್‍ಪಿ ಪರಶುರಾಮ್, ಡಿಎಸ್‍ಪಿ ಅವರಿಗೆ ಘಟನೆಯ ಕುರಿತು ವರದಿ ನೀಡಲು ಸೂಚನೆ ನೀಡಿದ್ದೇನೆ. ಬೈಕ್ ಸವಾರನೂ ಕೂಡ ಪೊಲೀಸರಿಗೆ ಪ್ರೇರೇಪಿಸುವ ಹಾಗೆ ಮಾತನಾಡಿದ್ದಾರೆ. ಪೊಲೀಸರ ಬಾಡಿ ಕ್ಯಾಮರಾವನ್ನು ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದ್ದೇನೆ. ವರದಿ ನಂತರ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.