ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಟೊಯೋಟಾ ವಾಹನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೂವರು ಮೃತಪಟ್ಟಿದ್ದು, ಮೂವರಿಗೆ ಗಂಭೀರವಾಗಿ ಗಾಯವಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಉದ್ದೇಬೋರನಹಳ್ಳಿ ಬಳಿ ನಡೆದಿದೆ.
ಮಹೇಶ್, ನಾಗರಾಜ್ ಮತ್ತು ಸುರೇಶ್ ಮೃತ ದುರ್ದೈವಿಗಳು. ಮೃತರು ಬಳ್ಳಾರಿ ಜಿಲ್ಲೆಯ ಹಗರಿ ಬೊಮ್ಮನಹಳ್ಳಿ ಮೂಲದವರು ಎಂದು ತಿಳಿದು ಬಂದಿದೆ. ಒಟ್ಟು ಆರು ಮಂದಿ ಟೊಯೋಟಾದಲ್ಲಿ ಧರ್ಮಸ್ಥಳದ ಮಂಜುನಾಥನ ದರ್ಶನಕ್ಕೆ ಹೋಗಿದ್ದರು. ಮಂಜುನಾಥನ ದರ್ಶನ ಮುಗಿಸಿಕೊಂಡು ವಾಪಸ್ ಬಳ್ಳಾರಿ ಹೋಗುತ್ತಿದ್ದರು.
ಇದೇ ವೇಳೆ ಉದ್ದೇಬೋರನಹಳ್ಳಿ ಬಳಿ ಚಾಲಕನ ನಿಯಂತ್ರಣ ತಪ್ಪಿ ವೇಗವಾಗಿ ಹೋಗಿ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಟೊಯೋಟಾದಲ್ಲಿದ್ದ ಮಹೇಶ್, ನಾಗರಾಜ್ ಮತ್ತು ಸುರೇಶ್ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನೂ ಮೂವರಿಗೆ ಗಂಭೀರವಾಗಿ ಗಾಯವಾಗಿದ್ದು, ಅವರನ್ನು ಚಿಕ್ಕಮಗಳೂರು ಜಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ಕುರಿತು ಕಡೂರು ತಾಲೂಕಿನ ಸಖರಾಯ ಪಟ್ಟಣದಲ್ಲಿ ಪ್ರಕರಣ ದಾಖಲಾಗಿದೆ.