– ಕೃತ್ಯದಲ್ಲಿ ಅಪ್ರಾಪ್ತನೂ ಭಾಗಿ
– ತಪ್ಪಿಸಿಕೊಳ್ಳಲು ಯತ್ನಿಸಿದ್ದಕ್ಕೆ ಸಂತ್ರಸ್ತೆ ಮೇಲೆ ಹಲ್ಲೆ
ಚಂಡೀಗಢ: ಮನೆಯಲ್ಲಿ ಮಲಗಿದ್ದ ಹುಡುಗಿಯನ್ನು ಅಪಹರಿಸಿಕೊಂಡು ಅಂಗನವಾಡಿಯಲ್ಲಿ ಐವರು ಸಾಮೂಹಿಕ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಹರಿಯಾಣದಲ್ಲಿ ನಡೆದಿದೆ.
ಪೊಲೀಸರು ಈ ಕುರಿತು ದೂರು ದಾಖಲಿಸಿಕೊಂಡಿದ್ದು, ಆರೋಪಿಗಳಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ. ಸಂತ್ರಸ್ತೆಯನ್ನು ಆಕೆಯ ಮನೆಯಿಂದಲೇ ಎತ್ತಿಕೊಂಡು ಹೋಗಿ ಸಮೀಪದಲ್ಲಿದ್ದ ಅಂಗನವಾಡಿಯಲ್ಲಿ ಐವರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ಏನಿದು ಪ್ರಕರಣ?
ಹರಿಯಾಣದ ಯಮುನಾ ನಗರದಲ್ಲಿರುವ ತನ್ನ ಮನೆಯಲ್ಲಿ ಸಂತ್ರಸ್ತೆ ಮಲಗಿದ್ದಳು. ಆಗ ಐವರು ಆರೋಪಿಗಳು ಆಕೆಯನ್ನು ಮನೆಯಿಂದಲೇ ಎತ್ತಿಕೊಂಡು ಲಾಕ್ ಆಗಿದ್ದ ಅಂಗನವಾಡಿಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಆಕೆಯ ಮೇಲೆ ಐವರು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಈ ವೇಳೆ ಸಂತ್ರಸ್ತೆ ಆರೋಪಿಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಮಾಡಿದ್ದಾಳೆ. ಆಗ ಆರೋಪಿಗಳು ಸಂತ್ರಸ್ತೆಯ ಮೇಲೆ ಹಲ್ಲೆ ಮಾಡಿದ್ದಾರೆ. ಇದರಿಂದ ಸಂತ್ರಸ್ತೆ ತುಂಬಾ ಗಾಯಗೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹೀನಾ ಕೃತ್ಯದಲ್ಲಿ ಅಪ್ರಾಪ್ತನೂ ಸಹ ಭಾಗಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಕೊನೆಗೆ ಸಂತ್ರಸ್ತೆ ಹೇಗೋ ಆರೋಪಿಗಳಿಂದ ತಪ್ಪಿಸಿಕೊಂಡು ಮನೆಗೆ ಹೋಗಿದ್ದಾಳೆ. ಅಲ್ಲಿ ತನ್ನ ಕುಟುಂಬದವರಿಗೆ ನಡೆದ ಘಟನೆಯ ಬಗ್ಗೆ ವಿವರಿಸಿದ್ದಾಳೆ. ತಕ್ಷಣ ಕುಟುಂಬದವರು ಸಂತ್ರಸ್ತೆಯೊಂದಿಗೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ.
ಪೊಲೀಸರು ತಕ್ಷಣ ಕ್ರಮಕೈಗೊಂಡು ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಂತ್ರಸ್ತೆ ಮತ್ತು ಕುಟುಂಬವರ ಹೇಳಿಕೆಯ ಆಧಾರದ ಮೇಲೆ ಆರೋಪಿಗಳ ವಿರುದ್ಧ ಅಪಹರಣ, ಸಾಮೂಹಿಕ ಅತ್ಯಾಚಾರ ಮತ್ತು ಹಲ್ಲೆ ಪ್ರಕರಣವನ್ನು ದಾಖಲಿಸಲಾಗಿದೆ. ಸದ್ಯಕ್ಕೆ ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿಗಾಗಿ ಕಾಯುತ್ತಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸಂತ್ರಸ್ತೆ ಐವರು ಆರೋಪಿಗಳ ಗುರುತನ್ನು ಸಹ ತಿಳಿಸಿದ್ದು, ಆ ಆಧಾರದ ಮೇಲೆ ಪೊಲೀಸರು ಆರೋಪಿಗಳನ್ನು ಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ತನಿಖಾಧಿಕಾರಿ ನಿರ್ಮಲ್ ಸಿಂಗ್ ತಿಳಿಸಿದ್ದಾರೆ.



