ಬೆಂಗಳೂರು: ಎಲ್ಲೆಲ್ಲೂ ಹೊಸ ವರ್ಷದ ಸಂಭ್ರಮ ಜೋರಾಗಿದೆ. ಹೊಸ ವರ್ಷಕ್ಕೆ ಪೊಲೀಸ್ ಇಲಾಖೆಯಿಂದ ಕೆಲವರಿಗೆ ಸರ್ಪ್ರೈಸ್ ಉಡುಗೊರೆ ದೊರೆತಿದೆ.
ಹೊಸ ವರ್ಷಕ್ಕೆ ಪೊಲೀಸ್ ಇಲಾಖೆ ವಿನೂತನ ಕೊಡುಗೆ ನೀಡಿದ್ದು, ಕಳ್ಳತನವಾದ ಚಿನ್ನಾಭರಣವನ್ನು ಅವರವರ ಮನೆಗೆ ತಲುಪಿಸಿದ್ದಾರೆ. ಹೊಸ ವರ್ಷ ರಾತ್ರಿ 12 ಗಂಟೆಗೆ ಇನ್ಸ್ ಪೆಕ್ಟರ್ ಮುಖಾಂತರ ರಿಕವರಿಯಾಗಿದ್ದ ವಸ್ತುಗಳನ್ನು ವಾಪಸ್ ನೀಡಿದ್ದಾರೆ.
ಕೋರ್ಟ್ ಅನುಮತಿ ಪಡೆದು ನಂತರ ಕಳ್ಳರಿಂದ ರಿಕವರಿ ಮಾಡಿಕೊಂಡಿದ್ದ ವಸ್ತುಗಳನ್ನು ಹೊಸ ವರ್ಷದ ಪ್ರಯುಕ್ತ ಸರ್ಪ್ರೈಸ್ ಆಗಿ ವಾಪಾಸ್ ನೀಡಿದ್ದಾರೆ. ಯಲಹಂಕ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಮಂಜೇಗೌಡ, ವೆಂಕಟೇಶ್ವರಲು ದಂಪತಿಗೆ ತಾವು ಕಳೆದುಕೊಂಡಿದ್ದ 40 ಗ್ರಾಂ ಚಿನ್ನಾಭರಣವನ್ನು ಹಿಂತಿರುಗಿಸಿದ್ದಾರೆ. ಪೊಲೀಸರು ಹುಣಸಮಾರನಹಳ್ಳಿ ಮನೆಗೆ ದಿಢೀರ್ ಭೇಟಿ ಕೊಟ್ಟು ಹೊಸ ವರ್ಷದ ಗಿಫ್ಟ್ ಕೊಟ್ಟಿದ್ದಾರೆ.
ಬೊಮ್ಮನಹಳ್ಳಿ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ರಾಜೇಶ್ ಕೋಟ್ಯಾನ್, ನಂದಕಿಶೋರ್ ಮನೆಗೆ ತೆರಳಿ ಮೂರು ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಾಪಸ್ ನೀಡಿದ್ದಾರೆ. ಹೀಗೆ ಪೊಲೀಸರು ಚಿನ್ನಾಭರಣ ಕಳೆದುಕೊಂಡಿದ್ದ ದಂಪತಿಗಳ ಮನೆಗೆ ಹೋಗಿ ವಸ್ತುಗಳನ್ನ ವಾಪಸ್ ನೀಡಿ ವಿಶಿಷ್ಟತೆ ಮೆರೆದಿದ್ದಾರೆ.
ಪೊಲೀಸ್ ಕಮೀಷನರ್ ಸುನೀಲ್ ಕುಮಾರ್ ಆದೇಶದ ಮೇರೆಗೆ ಪೊಲೀಸರು ಈ ಕರ್ತವ್ಯವನ್ನು ನೆರವೇರಿಸಿದ್ದಾರೆ.