ವಿಜಯಪುರ: ಭೀಮಾತೀರದ ಹಂತಕ ಶಶಿಧರ್ ಮುಂಡೆವಾಡಿ ಪಿಎಸ್‍ಐ ಮತ್ತು ಪೇದೆ ಮೇಲೆ ಚಾಕುನಿಂದ ಹಲ್ಲೆ ನಡೆಸಿರುವ ಘಟನೆ ವಿಜಯಪುರದ ಇಂಡಿ ತಾಲೂಕಿನ ಬರಡೋಲ ಗ್ರಾಮದ ಬಳಿ ನಡೆದಿದೆ.
ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ಪಡೆದ ಆರೋಪ ಎದುರಿಸುತ್ತಿರುವ ಶಶಿಧರ್ ಮುಂಡೆವಾಡಿ ಅಕ್ರಮ ಪಿಸ್ತೂಲ್ ಸಾಗಾಟ ಮಾಡುತ್ತಿದ್ದ ಶಂಕೆಯ ಮೇಲೆ ಆತ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಚಡಚಣ ಪಿಎಸ್‍ಐ ಗೋಪಾಲ್ ಹಳ್ಳುರ ತಪಾಸಣೆಗೆ ಮುಂದಾಗಿದ್ದರು. ಈ ವೇಳೆ ಶಶಿಧರ್ ಪಿಎಸ್‍ಐ ಗೋಪಾಲ ಹಳ್ಳೂರ್ ಹಾಗೂ ಓರ್ವ ಪೇದೆ ಮೇಲೆ ಚಾಕೂವಿನಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ.
Advertisement
Advertisement
ಶಶಿಧರ್ ಮುಂಡೆವಾಡಿ ಹಲ್ಲೆ ನಡೆಸಿದ ಸಮಯದಲ್ಲಿ ಪಿಎಸ್‍ಐ ಗೋಪಾಲ್ ಹಳ್ಳೂರ್ ಕೈಗೆ ತಾಗಿದ್ದು, ಪೇದೆಗೂ ಗಾಯವಾಗಿದೆ. ಈ ವೇಳೆ ಪಿಎಸ್‍ಐ ಗೋಪಾಲ ಅವರು ತಮ್ಮ ರಕ್ಷಣೆಗಾಗಿ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ್ದಾರೆ. ಅದರೂ ಆರೋಪಿ ಜಗ್ಗದ ಕಾರಣ ಶಶಿಧರ್ ಮುಂಡೆವಾಡಿ ಕಾಲಿಗೆ ಒಂದು ಸುತ್ತು ಗುಂಡು ಹಾರಿಸಿದ್ದಾರೆ. ಗುಂಡೇಟಿನಿಂದ ಗಾಯಗೊಂಡ ಶಶಿಧರ್ ಮುಂಡೆವಾಡಿ ಹಾಗೂ ಚಾಕುವಿನಿಂದ ಹಲ್ಲೆಗೆ ಒಳಗಾಗಿದ್ದ ಪಿಎಸ್‍ಐ ಗೋಪಾಲ್ ಮತ್ತು ಪೇದೆಯನ್ನು ಚಡಚಣ ಸರ್ಕಾರಿ ಪ್ರಾಥಮಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೂವರನ್ನು ವಿಜಯಪುರದ ಬಿಎಲ್‍ಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Advertisement
ಪೊಲೀಸ್ ದಾಳಿಯ ವೇಳೆ ಶಶಿಧರ್ ನಿಂದ ಎರಡು ನಾಡ ಪಿಸ್ತೂಲ್, ಜೀವಂತ ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಸುದ್ದಿ ತಿಳಿಯುತ್ತಿದಂತೆ ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್‍ಪಿ ಶಿವಕುಮಾರ್ ಗುಣಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಶಶಿಧರ್ ನನ್ನು ದಾಖಲಿಸಿರುವ ಆಸ್ಪತ್ರೆಗೆ ಇಂಡಿ ಪೊಲೀಸ್ ವಲಯದಿಂದ ಹೆಚ್ಚುವರಿ ಬೀಗಿ ಪೊಲೀಸ್ ಬಂದೋಬಸ್ತು ನಿಯೋಜಿಸಿಲಾಗಿದೆ.