ಬೆಂಗಳೂರು: ಬೆಳ್ಳಂಬೆಳಗ್ಗೆ ಸಿಲಿಕಾನ್ ಸಿಟಿಯಲ್ಲಿ ಗುಂಡಿನ ಸದ್ದು ಕೇಳಿಬಂದಿದ್ದು, ಪೊಲೀಸರು ರೌಡಿಶೀಟರ್ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ.
ಮಾಗಡಿ ರಸ್ತೆಯ ತುಂಗಾ ನಗರದಲ್ಲಿ ಈ ಘಟನೆ ಸಂಭವಿಸಿದ್ದು, ಕಾಮಾಕ್ಷಿಪಾಳ್ಯ ರೌಡಿಶೀಟರ್ ಶರವಣ ಅಲಿಯಾಸ್ ತರುಣ್ ಮೇಲೆ ಪೊಲೀಸರು ಗುಂಡಿನ ದಾಳಿ ಮಾಡಿದ್ದಾರೆ. ದರೋಡೆ ಪ್ರಕರಣದಲ್ಲಿ ಬೇಕಾಗಿದ್ದ ಶರವಣ ಅಲಿಯಾಸ್ ತರುಣ್‍ಗೆ ಗುಂಡು ಹಾರಿಸಿ, ಆತನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿ ಶರವಣ ಜೂನ್ 2ರಂದು ಕಾಮಾಕ್ಷಿಪಾಳ್ಯ ವ್ಯಾಪ್ತಿಯಲ್ಲಿ 3 ಲಕ್ಷ ರೂ. ದರೋಡೆ ಮಾಡಿದ್ದನು. ಈ ಘಟನೆ ಸಂಬಂಧ ಪ್ರದೀಪ್ ಮತ್ತು ಅಕ್ಷಯ್ ಬಂಧನವಾಗಿತ್ತು. ಅದರೆ ಆರೋಪಿ ಶರವಣ ಪರಾರಿಯಾಗಿದ್ದನು. ಇಂದು ಖಚಿತ ಮಾಹಿತಿ ಮೇರೆಗೆ ಶರವಣನನ್ನ ಬಂಧಿಸಲು ಪೊಲೀಸರ ತೆರಳಿದ್ದರು. ಆದರೆ ಬಂಧಿಸಲು ಹೋಗಿದ್ದ ಪೊಲೀಸರ ಮೇಲೆ ರೌಡಿಶೀಟರ್ ತಿರುಗಿಬಿದ್ದಾನೆ. ಈ ವೇಳೆ ಪೋಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ. ಹೀಗಾಗಿ ಬೇರೆ ದಾರಿಯಿಲ್ಲದೇ ವಿಜಯನಗರ ಇನ್ಸ್ ಪೆಕ್ಟರ್ ಜಿ.ಎ. ನಾಗೇಶ್, ರೌಡಿ ಶೀಟರ್ ಕಾಲಿಗೆ ಗುಂಡು ಹಾರಿಸಿದ್ದಾರೆ.
ಸದ್ಯ ಗಾಯಾಳು ರೌಡಿಶೀಟರ್ ಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.