ಬೆಂಗಳೂರು: ಮೊನ್ನೆಯಷ್ಟೆ ಕ್ಷುಲ್ಲಕ ವಿಚಾರಕ್ಕೆ ಟೆಕ್ಕಿಯನ್ನು ಕೊಲೆ ಮಾಡಿದ್ದ ಆರೋಪಿಯ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದರು. ಈಗ ಪೊಲೀಸರು ಮಗು ಕದ್ದ ಕಿಡ್ನಾಪರ್ ಮೇಲೆ ಫೈರಿಂಗ್ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಬಾಗಲೂರು ಕ್ರಾಸ್ ಬಳಿ ಇಂದು ಬೆಳಗ್ಗೆ 5 ಗಂಟೆ ಸುಮಾರಿಗೆ ನೂರ್ ಎಂಬವನ ಮೇಲೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.
Advertisement
ಏನಿದು ಕಿಡ್ನಾಪ್ ಕೇಸ್?: ರಾಯಚೂರು ಮೂಲದ ಭೀಮೇಶ್, ಮಹೇಶ್ವರಿ ದಂಪತಿಯ ಮಗು ಅಭಿರಾಮ್‍ನನ್ನು ಅಕ್ಟೋಬರ್ 5ರಂದು ಕಿಡ್ನಾಪ್ ಮಾಡಲಾಗಿತ್ತು. ನೂರ್ ಮೊಹಮ್ಮದ್, ವಾಹಿದ್ ಹಾಗೂ ಮತ್ತೋರ್ವ ಅಪ್ರಾಪ್ತ ಸೇರಿ ಮಗುವನ್ನ ಅಪಹರಣ ಮಾಡಿ ಶಹನಾಜ್ ಖಾನಮ್ ಎಂಬ ಮಹಿಳೆಗೆ ಕೊಟ್ಟಿದ್ರು. ಈ ಸಂಬಂಧ ಇಬ್ಬರು ಆರೋಪಿಗಳ ಬಂಧನವಾಗಿತ್ತು. ಇಂದು ಬೆಳಗಿನ ಜಾವ ಮತ್ತೊಬ್ಬ ಆರೋಪಿ ನೂರ್‍ನನ್ನು ಸೆರೆಹಿಡಿಯಲು ಹೋದಾಗ ಶೂಟೌಟ್ ನಡೆದಿದೆ.
Advertisement
Advertisement
ಆಗಿದ್ದೇನು?: ಶುಕ್ರವಾರ ಬೆಳಗ್ಗೆ ಬಾಗಲೂರು ಲೇಔಟ್ ಬಳಿ ಆರೋಪಿ ನೂರ್ ಇರುವಿಕೆ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಕೊತ್ತನೂರು ಇನ್ಸ್ ಪೆಕ್ಟರ್ ಹರಿಯಪ್ಪ ನೇತೃತ್ವದ ತಂಡ ಆರೋಪಿಯನ್ನ ಹಿಡಿಯಲು ಮುಂದಾಗಿದ್ದರು. ಈ ವೇಳೆ ಆರೋಪಿ ನೂರ್ ಪಿಎಸ್‍ಐ ನಾಯಕ್ ಮತ್ತು ಮುಖ್ಯ ಪೇದೆ ಅಬ್ದುಲ್ ಹಮಿದ್ ಅವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದ. ಈ ಹಿನ್ನೆಲೆಯಲ್ಲಿ ಆತ್ಮರಕ್ಷಣೆಗಾಗಿ ಇನ್ಸ್ ಪೆಕ್ಟರ್ ಹರಿಯಪ್ಪ ಆರೋಪಿ ನೂರ್ ಕಾಲಿಗೆ ಗುಂಡು ಹಾರಿಸಿದ್ದಾರೆ.
Advertisement
ಈಶಾನ್ಯ ವಿಭಾಗದ ಡಿಸಿಪಿ ಗಿರೀಶ್ ಈ ಬಗ್ಗೆ ಹೇಳಿಕೆ ನೀಡಿದ್ದು, ಅಕ್ಟೋಬರ್ 5ನೇ ಕೊತ್ತನೂರಿನಲ್ಲಿ ಮನೆಯಲ್ಲಿ ಆಟವಾಡುತ್ತಿದ್ದ 1 ವರ್ಷದ ಮಗುವನ್ನು ಆರೋಪಿಗಳು ಕಿಡ್ನಾಪ್ ಮಾಡಿದ್ದರು. ಸಿಸಿಟಿವಿ ಪರಿಶೀಲಿಸಿದಾಗ 3 ಜನ ಮಗುವನ್ನು ತೆಗೆದುಕೊಂಡು ಹೋಗೋದು ಗೊತ್ತಾಗಿತ್ತು. ಕೊತ್ತನೂರು ಇನ್ಸ್ ಪೆಕ್ಟರ್ ಹರಿಯಪ್ಪ ನೇತೃತ್ವದ ತಂಡ ಮಗುವಿಗಾಗಿ ತೀವ್ರ ಶೋಧ ನಡೆಸಿದ್ರು ಅಂತ ಹೇಳಿದ್ರು.
ಕಿಡ್ನಾಪ್ ಮಾಡಿದ್ದು ಯಾಕೆ?: ಆರೋಪಿಗಳು ಮಗುವನ್ನು ಶಿವಾಜಿನಗರದ ಶಹನಾಜ್ ಖಾನಮ್ ಬಳಿ ಬಿಟ್ಟಿದ್ದರು. ಅಸಲಿಗೆ ಕಿಡ್ನಾಪ್ ರೂವಾರಿಯೇ ಶಹನಾಜ್ ಖಾನಮ್. ಈಕೆ ಮಗುವಿನ ಕಿಡ್ನಾಪ್ ಗಾಗಿ ನೂರ್‍ಗೆ 15 ಸಾವಿರ ರೂ. ಹಣ ಕೊಟ್ಟಿದ್ದಳು. ಶಹನಾಜ್‍ನ ದೊಡ್ಡ ಮಗಳಿಗೆ ಪರಿಚಯವಿದ್ದ ನೂರ್‍ನಿಂದ ಕಿಡ್ನಾಪ್ ಮಾಡಿಸಿದ್ದಳು. ಶಹನಾಜ್‍ನ ಮಗಳು ಹಾಗೂ ನೂರ್ ಮದುವೆಯಾಗಲು ಪ್ಲಾನ್ ಮಾಡಿದ್ದರು. ಹೀಗಾಗಿ ಮಗು ಕಿಡ್ನಾಪ್ ಮಾಡಲು ಒಪ್ಪಿಕೊಂಡಿದ್ದ. ಶಹನಾಜ್‍ಗೆ ಎರಡನೇ ಮದುವೆಯಾಗಿದ್ದು ಆಕೆಯ ಗಂಡ ಸರಿಯಾಗಿ ನೋಡಿಕೊಳ್ತಿರಲಿಲ್ಲ. ಮಗು ಇಲ್ಲವೆಂದು ಸರಿಯಾಗಿ ನೋಡಿಕೊಳ್ಳದೇ, ಮನೆಗೂ ಬರುತ್ತಿರಲಿಲ್ಲ. ಹೀಗಾಗಿ ತನಗೆ ಗಂಡು ಮಗುವಾಗಿದೆ ಎಂದು ಹೇಳಿದ್ರೆ ಗಂಡ ತನ್ನ ಖರ್ಚಿಗೆ ಹಣ ಕೊಡಬಹುದು ಎಂದು ಮಾಸ್ಟರ್ ಪ್ಲಾನ್ ಮಾಡಿದ್ದಳು. ಹೀಗಾಗಿ ಮಗುವನ್ನು ಕಿಡ್ನಾಪ್ ಮಾಡಿಸಿದ್ದಳು ಎಂದು ಡಿಸಿಪಿ ಗಿರೀಶ್ ತಿಳಿಸಿದ್ರು.
ಖಚಿತ ಮಾಹಿತಿ ಮೇರೆಗೆ ನೂರ್ ಬಂಧನಕ್ಕೆ ಪ್ರಯತ್ನಿಸಿದಾಗ ಪೊಲೀಸರ ಮೇಲೆ ಹಲ್ಲೆ ನಡೆಸಿದ. ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದ್ರು. ಸದ್ಯ ಗಾಯಗೊಂಡ ಪೊಲೀಸರನ್ನು ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗು ಅಭಿರಾಮ್ ನನ್ನು ಸುರಕ್ಷಿತವಾಗಿ ಪೋಷಕರಿಗೆ ಒಪ್ಪಿಸಲಾಗಿದೆ ಅಂತ ತಿಳಿಸಿದ್ರು.