ಬೆಂಗಳೂರು: ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಬರೆದಿರುವ ಪೋಸ್ಟರ್ ಹಿಡಿದು ಪ್ರತಿಭಟನೆ ಮಾಡಿದ ವಿದ್ಯಾರ್ಥಿಗಳ ಮೇಲೆ ಎಫ್‍ಐಆರ್ ದಾಖಲು ಮಾಡಲಾಗಿದೆ.
ಬೆಂಗಳೂರಿನಲ್ಲಿ ನಿಷೇದಾಜ್ಞೆ ಜಾರಿಯಲ್ಲಿದ್ದರೂ ವಿದ್ಯಾರ್ಥಿಗಳು ಅದನ್ನು ಉಲ್ಲಂಘಿಸಿ ಪ್ರತಿಭಟನೆ ಮಾಡುತ್ತಿದ್ದರು. ಅಲ್ಲದೇ ಬೇರೆ ಧರ್ಮದ ಬಗ್ಗೆ ಕೆಟ್ಟದಾಗಿ ಬರೆದುಕೊಂಡು ಘೋಷಣೆ ಕೂಗುತ್ತಿದ್ದರು. ಹೀಗಾಗಿ ಎಂಟು ವಿದ್ಯಾರ್ಥಿಗಳ ಮೇಲೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ಎರಡು ಎಫ್‍ಐಆರ್ ದಾಖಲು ಮಾಡಿ ತನಿಖೆ ಆರಂಭಿಸಿದ್ದಾರೆ. ಪ್ರತಿಭಟನೆಯ ವಿಡಿಯೋ ಹಾಗೂ ಪೋಸ್ಟರ್ ಸಾಕ್ಷಿಯಾಗಿ ಪಡೆದು ದೂರು ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕಾಲೇಜು, ಕ್ರೈಸ್ಟ್ ಕಾಲೇಜು, ಸೆಂಟ್ರಲ್ ಕಾಲೇಜ್ ಮತ್ತು ಎನ್‍ಎಂಕೆ ಆರ್ವಿ ಕಾಲೇಜ್ ವಿದ್ಯಾರ್ಥಿಗಳು ಎಂದು ಪ್ರಾಥಮಿಕ ತನಿಖೆಯ ವೇಳೆ ತಿಳಿದು ಬಂದಿದೆ. ಅಷ್ಟೇ ಅಲ್ಲದೇ ಪೊಲೀಸ್ ಮೂಲಗಳಿಂದ ವಿದ್ಯಾರ್ಥಿಗಳ ಹೆಸರು ಪಡೆದು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸರೋವರ, ಅಮೃತ, ತೇರೆಸಾ, ಗೋಪಾಲ, ಗೌತಮ್, ರಾಜ್ ಎಂಬ ವಿದ್ಯಾರ್ಥಿಗಳ ಹೆಸರು ಎಫ್‍ಐಆರ್ ನಲ್ಲಿ ನಮೂದಿಸಿ ಆರೋಪಿಗಳನ್ನಾಗಿ ಮಾಡಲಾಗಿದೆ.
ಆರೋಪಿಗಳ ಪೂರ್ವಪರ ಖಚಿತ ಪಡಿಸಿಕೊಳ್ಳಲು ಪೊಲೀಸರು ಪ್ರತಿಭಟನೆ ವೇಳೆ ಸಿಕ್ಕಿರುವ ವಿಡಿಯೋಗಳನ್ನ ಸಂಬಂಧಪಟ್ಟ ಕಾಲೇಜುಗಳಿಗೆ ಕಳಿಸಿಕೊಟ್ಟಿದ್ದಾರೆ. ಜೊತೆಗೆ ಯಾವ ಕಾಲೇಜಿನ ಯಾವ ವಿದ್ಯಾರ್ಥಿಗಳು ಹಾಗೂ ಎಫ್‌ಐಆರ್‌ನಲ್ಲಿರುವ ವಿದ್ಯಾರ್ಥಿಗಳ ಹೆಸರು ಪಕ್ಕಾನ ಎಂಬುವುದರ ಮಾಹಿತಿ ಕೊಡಲು ಶಾಲಾ ಆಡಳಿತ ಮಂಡಳಿ ಬಳಿ ಮಾಹಿತಿ ಕೇಳಿದ್ದಾರೆ. ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ಸಮರ್ಪಕವಾಗಿ ಕೊಡದೆ ಹೋದರೆ ಸಂಬಂದಪಟ್ಟ ಕಾಲೇಜ್‍ಗೂ ಪೊಲೀಸರು ನೋಟಿಸ್ ನೀಡಲಿದ್ದಾರೆ.