ಚಾಮರಾಜನಗರ: ಟ್ರಾಫಿಕ್ ರೂಲ್ಸ್ ಉಲ್ಲಂಘನೆಗೆ ದಂಡದ ಮೊತ್ತ ಹೆಚ್ಚಿಸಿದ ನಂತರ ಸಂಚಾರಿ ಪೊಲೀಸರ ಕಾರ್ಯಾಚರಣೆ ಜೋರಾಗಿದೆ. ಹಾಗೆಯೇ ಸಂಚಾರಿ ನಿಯಮ ಉಲ್ಲಂಘಿಸಿದವರನ್ನು ಹಿಡಿದು ದಂಡ ಹಾಕುತ್ತಿರುವ ಪ್ರಕರಣಗಳು ಕೂಡ ಹೆಚ್ಚಾಗುತ್ತಿವೆ.
ಚಾಮರಾಜನಗರದಲ್ಲಿ ಸಂಚಾರಿ ಸಹಾಯಕ ಸಬ್ ಇನ್ಸ್ ಪೆಕ್ಟರ್ ನಂಜಪ್ಪ ಅವರು ಹಳೆ ಖಾಸಗಿ ಬಸ್ ನಿಲ್ದಾಣದಲ್ಲಿ ಚೆಕ್ಕಿಂಗ್ ನಡೆಸುತ್ತಿದ್ದರು. ಈ ವೇಳೆ ಅವರು ವಾಹನದ ಚಾಲಕನೊಬ್ಬನಿಗೆ ಅಧಿಕೃತ ರಶೀದಿ ನೀಡದೆ ಆತನಿಂದ ಹಣ ಪಡೆದು ಜೇಬಿಗಿಳಿಸುತ್ತಿರುವುದು ಕಂಡು ಬಂದಿದೆ.
Advertisement
Advertisement
ಸಂಚಾರಿ ಎಎಸ್‍ಐ ನಂಜಪ್ಪ ಹಳೆ ಖಾಸಗಿ ಬಸ್ ನಿಲ್ದಾಣದ ಬಳಿ ತಮ್ಮ ಬೈಕಿನಲ್ಲಿ ಕುಳಿತು ದಂಡದ ಹಣಕ್ಕೆ ರಶೀದಿ ಹಾಕುವಂತೆ ನಾಟಕ ಮಾಡಿದ್ದಾರೆ. ಬಳಿಕ ವಾಹನ ಚಾಲಕ ನೀಡಿದ ಹಣವನ್ನು ತಮ್ಮ ಜೇಬಿಗೆ ಇಳಿಸಿದ್ದಾರೆ. ಇದನ್ನು ನೋಡಿದ ಸ್ಥಳೀಯರು ಮೊಬೈಲಿನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಜನ ಪೊಲೀಸರ ವಿರುದ್ಧ ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.