ಶ್ರೀನಗರ: ಕಳೆದ ವಾರ ಉಪಚುನಾವಣೆ ವೇಳೆ ಪ್ರತಿಭಟನಕಾರರ ಕಲ್ಲು ತೂರಾಟದಿಂದ ತಪ್ಪಿಸಿಕೊಳ್ಳಲು ಭದ್ರತಾ ಪಡೆ ವ್ಯಕ್ತಿಯೊಬ್ಬರನ್ನು ಜೀಪ್‍ಗೆ ಕಟ್ಟಿದ ಆರೋಪದ ಮೇಲೆ ಸೇನೆಯ ವಿರುದ್ಧ ಜಮ್ಮು ಕಾಶ್ಮೀರ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.
ಕಲ್ಲು ತೂರಾಟದಿಂದ ರಕ್ಷಿಸಿಕೊಳ್ಳುವ ಸಲುವಾಗಿ ಸೇನಾ ಪಡೆ ವ್ಯಕ್ತಿಯೊಬ್ಬರನ್ನು ಜೀಪ್‍ಗೆ ಕಟ್ಟಿದ್ದ ವಿಡಿಯೋ ವೈರಲ್ ಆಗಿತ್ತು. ಇದಕ್ಕೆ ಭಾರೀ ಖಂಡನೆ ಕೂಡ ವ್ಯಕ್ತವಾಗಿತ್ತು. ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ರಾಜ್ಯದ ಪೊಲೀಸರಿಗೆ ಘಟನೆ ಬಗ್ಗೆ ವರದಿ ಕೇಳಿದ್ದರು. ಸೇನೆ ಕೂಡ ಘಟನೆ ಬಗ್ಗೆ ಆಂತರಿಕ ತನಿಖೆ ಆರಂಭಿಸಿತ್ತು. ಗೃಹ ಸಚಿವ ರಾಜನಾಥ್ ಸಿಂಗ್ ಪ್ರಕರಣದ ಕುರಿತು ಪರಿಶೀಲಿಸುವುದಾಗಿ ಹೇಳಿದ್ದರು. ಇದೀಗ ವ್ಯಕ್ತಿಯ ಅಪಹರಣ ಹಾಗೂ ಆತನ ಜೀವಕ್ಕೆ ಆಪತ್ತು ತಂದ ಆರೋಪಗಳ ಮೇಲೆ ಸೇನೆಯ ವಿರುದ್ಧ ಎಫ್‍ಐಆರ್ ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Advertisement
ಏಪ್ರಿಲ್ 9 ರಂದು ಶ್ರೀನಗರ ಕ್ಷೇತ್ರದಲ್ಲಿ ಉಪಚುನಾವಣೆಯ ಸಂದರ್ಭದಲ್ಲಿ ಜನರ ಗುಂಪು ಚುನಾವಣಾ ಅಧಿಕಾರಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಸುಮಾರು 400 ಪ್ರತಿಭಟನಾಕಾರರು ಅಧಿಕಾರಗಳ ಮೇಲೆ ದಾಳಿ ಮಾಡಲು ಮುಂದಾಗಿದ್ದರು. ಈ ವೇಳೆ ರಕ್ಷಣೆಗಾಗಿ ವ್ಯಕ್ತಿಯನ್ನ ಜೀಪ್‍ಗೆ ಕಟ್ಟಲಾಗಿತ್ತು. ಆ ವ್ಯಕ್ತಿಗೆ ಯಾವುದೇ ಹಾನಿಯಾಗಿಲ್ಲ ಎಂದು ವರದಿಯಾಗಿದೆ.
Advertisement
ಜೀಪ್‍ಗೆ ಕಟ್ಟಲಾಗಿದ್ದ ವ್ಯಕ್ತಿಯನ್ನು ಫರೂಕ್ ಅಹ್ಮದ್ ದರ್ ಎಂದು ಗುರುತಿಸಲಾಗಿದೆ. ಇವರು ಬುದ್ಗಾಮ್ ಜಿಲ್ಲೆಯ ಖಾಗ್‍ನ ಸೀತಾಹರಣ್ ನಿವಾಸಿಯಾಗಿದ್ದಾರೆ. ಹಾಗೇ ಜೀಪ್‍ಗೆ ವ್ಯಕ್ತಿಯನ್ನು ಕಟ್ಟಿದ ಸೇನಾ ಘಟಕ 53 ರಾಷ್ಟ್ರೀಯ ರೈಫಲ್ಸ್ ಗೆ ಸೇರಿದವರು ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳು ತಿಳಿಸಿದ್ದಾರೆ.
Advertisement
ತನಿಖೆ ವೇಳೆ ಫರೂಕ್ ಅವರು ಹೇಳಿಕೆ ನೀಡಿದ್ದು, ಅಂದು ನಾನು ಓಟ್ ಮಾಡಿದ ನಂತರ ಸಂಬಂಧಿಕರೊಬ್ಬರು ಮೃತಪಟ್ಟಿದ್ದ ಕಾರಣ ಸಹೋದರಿಯ ಮನೆಗೆ ಹೋಗುತ್ತಿದ್ದೆ. ಚುನಾವಣಾ ಸಿಬ್ಬಂದಿಯೊಂದಿಗೆ ಬೀರ್ವಾ ಗ್ರಾಮವನ್ನ ಪ್ರವೇಶಿಸಬೇಕಿದ್ದ ಸೇನಾ ದಳ, ನನ್ನನ್ನು ಕರೆದುಕೊಂಡು ಹೋಗಿ ಜೀಪ್‍ಗೆ ಕಟ್ಟಿದ್ರು ಎಂದು ಹೇಳಿದ್ದಾರೆ.
Advertisement
ಪ್ರತ್ಯೇಕವಾದಿಗಳು ಚುನಾವಣೆ ಬಹಿಷ್ಕಾರಕ್ಕೆ ನೀಡಿದ ಕರೆ ಹಾಗೂ ಬೆದರಿಕೆಯ ನಡುವೆಯೇ ನಡೆದ ಶ್ರೀನಗರ ಉಪಚುನಾವಣೆಯ ವೇಳೆ ನಡೆದ ಘರ್ಷಣೆಯಲ್ಲಿ 8 ಮಂದಿ ಮೃತಪಟ್ಟು ಸುಮಾರು 100 ಜನ ಗಾಯಗೊಂಡಿದ್ದರು. ಇವಿಎಂಗಳನ್ನು ಧ್ವಂಸಗೊಳಿಸಲಾಗಿತ್ತು.
ಇನ್ನು ಸಿಆರ್‍ಪಿಎಫ್ ಯೋಧರ ಮೇಲೆ ಗುಂಪೊಂದು ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ. ಪ್ರತಿಭಟನಾಕಾರರು ಯೋಧರೊಬ್ಬರು ಮೇಲೆ ಹಲ್ಲೆ ಮಾಡಿದ್ದು, ಎಷ್ಟೇ ಪ್ರಚೋದಿಸಿದ್ರೂ ಆ ಯೋಧ ಅದಕ್ಕೆ ಪ್ರತಿಕ್ರಿಯಿಸದೇ ಸುಮ್ಮನೆ ನಡೆದುಕೊಂಡು ಹೋಗುವ ವಿಡಿಯೋ ಕೂಡ ವೈರಲ್ ಆಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಈಗಾಗಲೇ ಬಂಧಿಸಲಾಗಿದೆ.