ಕೊಪ್ಪಳ: ಗ್ರಾಮ ಪಂಚಾಯಿತಿ (Grama Panchayat) ಅಧ್ಯಕ್ಷ ಸ್ಥಾನದ ಮೀಸಲಾತಿ ಪ್ರಶ್ನಿಸಿ ಹೈಕೋರ್ಟ್‍ನ ಧಾರವಾಡ ಪೀಠದಿಂದ (High Court) ತಡೆಯಾಜ್ಞೆ ತಂದಿದ್ದಕ್ಕೆ ಎರಡು ಗುಂಪು ಗಲಭೆಗೆ ಯತ್ನಿಸಿದ ಪ್ರಕರಣ ಕಾರಟಗಿಯ ಬುದಗುಂಪಾ ಗ್ರಾಮದಲ್ಲಿ ನಡೆದಿದೆ. ಗಲಭೆಗೆ ಯತ್ನಿಸಿದ ಎರಡು ಗುಂಪುಗಳ 30 ಜನರ ವಿರುದ್ಧ ಎಫ್‍ಐಆರ್ (FIR) ದಾಖಲಾಗಿದೆ.
ಗ್ರಾಮ ಪಂಚಾಯತ್‍ನ ಅಧ್ಯಕ್ಷ ಸ್ಥಾನ ಎಸ್‍ಟಿ ಸಮುದಾಯದ ಮಹಿಳೆಗೆ ಮೀಸಲಾಗಿದ್ದು, ಎಸ್‍ಸಿ ಮೀಸಲಾತಿ ಸಿಗಬೇಕಿತ್ತು ಎಂದು ಆಕ್ಷೇಪ ವ್ಯಕ್ತಪಡಿಸಿ ಗ್ರಾಮದ ಲಕ್ಷ್ಮಿ ಅಡಿವೆಪ್ಪ ಎಂಬುವರು ಹೈಕೋರ್ಟ್ ಮೊರೆ ಹೋಗಿದ್ದರು. ನಮ್ಮ ಸಮುದಾಯಕ್ಕೆ ಅಧ್ಯಕ್ಷ ಸ್ಥಾನ ಕೈತಪ್ಪುವಲ್ಲಿ ಲಕ್ಷ್ಮಿ ಅಡಿವೆಪ್ಪ ಜೊತೆ ಮುಂದುವರಿದ ಸಮಾಜದ ಕೆಲ ಜನ ಕೈ ಹಾಕಿದ್ದಾರೆ ಎನ್ನುವ ಶಂಕೆಯಿಂದಾಗಿ ಎಸ್‍ಟಿ ಸಮುದಾಯಕ್ಕೆ ಸೇರಿದ ಸುರೇಶ ನಾಯಕ ಎಂಬುವರು ಅಸಮಾಧಾನ ಗೊಂಡಿದ್ದರು. ಇದರಿಂದಾಗಿ ಎರಡೂ ಕಡೆಯ ಗುಂಪಿನ ಜನರು ಮಾರಾಕಾಸ್ತ್ರಗಳೊಂದಿಗೆ ಗ್ರಾಮದ ಕೇಂದ್ರ ಭಾಗವಾದ ಬಸವೇಶ್ವರ ವೃತ್ತದ ಬಳಿ ಜಮಾಯಿಸಿದ್ದರು. ಜನ ಸೇರಿದ ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರೂ (Police) ಎರಡೂ ಗುಂಪಿನವರಿಗೆ ಎಚ್ಚರಿಕೆ ನೀಡಿ ಗಲಭೆ ತಪ್ಪಿಸಿದ್ದಾರೆ.
ಆದರೂ ಗ್ರಾಮದಲ್ಲಿ ಬಿಗುವಿನ ವಾತಾವರಣವಿದೆ. ಶನಿವಾರ ಮಧ್ಯರಾತ್ರಿಯೇ ಬಳ್ಳಾರಿ ಐಜಿ ಲೋಕೇಶ್ ಕುಮಾರ್, ವಿಜಯನಗರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಮೇಲೆ ನಿಗಾ ವಹಿಸಲು ತಮ್ಮ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದರು.
ಅಲ್ಲದೇ ಗಲಭೆಗೆ ಯತ್ನಿಸಿದ ಎರಡೂ ಗುಂಪುಗಳಲ್ಲಿದ್ದ ಜನಗಳ ಮೇಲೆ ಇಲಾಖೆಯು ಸ್ವಯಂ ಪ್ರೇರಿತವಾಗಿ 30 ಜನರ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡಿದೆ. ಎಂಟು ಜನರನ್ನು ಬಂಧಿಸಲಾಗಿದೆ ಎಂದು ಕಾರಟಗಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಿದ್ರಾಮಯ್ಯ ಬಿ.ಎಂ ತಿಳಿಸಿದ್ದಾರೆ.
ಗ್ರಾಮದಲ್ಲಿ ಮೂರು ಕೆಎಸ್‍ಆರ್‌ಪಿ ತಂಡ, ಎರಡು ಜಿಲ್ಲಾ ಮೀಸಲು ಪಡೆ ಮತ್ತು ವಿವಿಧ ಠಾಣೆಗಳ ಪೊಲೀಸರನ್ನು ನಿಯೋಜಿಸಲಾಗಿದೆ.
Web Stories