ರಾಯಚೂರು: ಜಿಲ್ಲಾ ಪೊಲೀಸ್ ಶ್ವಾನದಳದಲ್ಲಿ 13 ವರ್ಷ ಕಾಲ ಸೇವೆ ಸಲ್ಲಿಸಿ ಸಾವನ್ನಪ್ಪಿರುವ ಶ್ವಾನ ರೂಬಿಗೆ ಸಕಲ ಸರ್ಕಾರಿ ಗೌರವ ವಂದನೆಗಳೊಂದಿಗೆ ಅಂತ್ಯಸಂಸ್ಕಾರ ಮಾಡಲಾಗಿದೆ.
ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಗೌರವ ವಂದನೆ ಸಲ್ಲಿಸಲಾಯಿತು. ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿ.ಬಿ ವೇದಮೂರ್ತಿ ಅಂತಿಮ ಸಂಸ್ಕಾರ ನೆರವೇರಿಸಿದರು. ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಗೌರವ ವಂದನೆ ಸಲ್ಲಿಸಲಾಯಿತು.
Advertisement
Advertisement
ಬೆಂಗಳೂರಿನ ಆಡಗೋಡಿಯಲ್ಲಿ ತರಬೇತಿ ಪಡೆದ ಡಾಬರಮನ್ ತಳಿಯ ರೂಬಿ ಮೂರು ತಿಂಗಳು ಇದ್ದಾಗಿನಿಂದ ರಾಯಚೂರು ಜಿಲ್ಲಾ ಶ್ವಾನದಳದಲ್ಲಿ ಸೇವೆ ಸಲ್ಲಿಸುತ್ತಾ ಬಂದಿದೆ. 2006ರಿಂದ ಇದುವರೆಗೆ 13 ವರ್ಷಗಳ ಸೇವಾ ಅವಧಿಯಲ್ಲಿ 246 ಪ್ರಕರಣಗಳಲ್ಲಿ ಕೆಲಸ ಮಾಡಿದ ರೂಬಿ 18 ಪ್ರಕರಣಗಳಲ್ಲಿ ಆರೋಪಿಗಳನ್ನ ಸ್ವತಃ ಪತ್ತೆ ಹಚ್ಚಿದೆ.
Advertisement
ಪೊಲೀಸ್ ಇಲಾಖೆಗೆ ತಲೆ ನೋವಾಗಿದ್ದ ಶಕ್ತಿನಗರದ ಇಂಜಿನಿಯರ್ ಕೊಲೆ ಪ್ರಕರಣವನ್ನು ರೂಬಿ ಭೇದಿಸಿತ್ತು. ಅನಾರೋಗ್ಯದಿಂದ ರೂಬಿ ಸಾವನ್ನಪ್ಪಿರುವುದು ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಶ್ವಾನದಳ ಘಟಕಕ್ಕೆ ತುಂಬಲಾರದ ನಷ್ಟವಾಗಿದೆ. ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದ ರೂಬಿ ಅಗಲಿಕೆ ನೋವನ್ನ ತಂದಿದೆ ಅಂತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ ವೇದಮೂರ್ತಿ ಹೇಳಿದ್ದಾರೆ.