ಚಿಕ್ಕಮಗಳೂರು: ಭದ್ರತೆಗಾಗಿ ನಾಲ್ಕು ಸಾವಿರ ಪೊಲೀಸರು ನಿಯೋಜನೆಗೊಂಡಿದ್ದರೂ ದತ್ತಜಯಂತಿಯನ್ನ ಶಾಂತಿಯುತವಾಗಿ ನಿಭಾಯಿಸುವಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ. ಜಿಲ್ಲಾಧಿಕಾರಿ ಶ್ರೀರಂಗಯ್ಯ, ಎಸ್ಪಿ ಅಣ್ಣಾಮಲೈ ಹಾಗೂ ಪಶ್ವಿಮ ವಲಯದ ಐಜಿಪಿ ಹೇಮಂತ್ ನಿಂಬಾಳ್ಕರ್ ಅದೇ ಸ್ಥಳದಲ್ಲಿದ್ದರೂ ಕೂಡ ದತ್ತಪೀಠದಲ್ಲಿ ನಡೆಯಬಾರದೆಲ್ಲ ನಡೆದಿದೆ.
ಕಳೆದ ಮೂರು ದಿನಗಳಿಂದ ಶಾಂತಿಯುತವಾಗಿದ್ದ ಚಿಕ್ಕಮಗಳೂರಿನ ದತ್ತಜಯಂತಿ ಕಾರ್ಯಕ್ರಮ ಭಾನುವಾರ ಮಧ್ಯಾಹ್ನ ಅಕ್ಷರಶಃ ಧರ್ಮಪ್ರತಿಪಾದನೆಯ ಕಾರ್ಯಕ್ರಮದಂತಾಯ್ತು. ಸಾವಿರಾರು ಮಾಲಾಧಾರಿಗಳು ಏಕಕಾಲದಲ್ಲಿ ದತ್ತಪೀಠದ ನಿಷೇಧಿತ ಪ್ರದೇಶಕ್ಕೆ ನುಗ್ಗಿ ಅಲ್ಲಿ ಕೇಸರಿ ಬಾವುಟಗಳನ್ನ ನೆಟ್ಟು ಅಲ್ಲಿಂದ ಗೋರಿಗಳನ್ನ ಕಾಲಲ್ಲಿ ತುಳಿದು, ಅವುಗಳ ಮೇಲೆ ಕಲ್ಲುಗಳನ್ನ ಎತ್ತಿಹಾಕಿದ್ದಾರೆ.
ಒಂದು ಗೋರಿಯನ್ನು ಸಂಪೂರ್ಣ ಒಡೆದು ಹಾಕಿದ್ದಾರೆ. ಪೊಲೀಸರು ಎಷ್ಟೇ ಹರ ಸಾಹಸಪಟ್ಟರೂ ಒಬ್ಬರಾದ ಮೇಲೆ ಒಬ್ಬರಂತೆ ನಿಷೇಧಿತ ಸ್ಥಳಕ್ಕೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಪೊಲೀಸರಿಗೂ ಬಯ್ಯುತ್ತಾ, ಮಾಧ್ಯಮದವರಿಗೂ ಶೋಕಿ ನನ್ಮಕ್ಳು ಎಂದು ಹೇಳಿ ಕ್ಯಾಮೆರಾ ಕಸಿದು ಕೆಲವರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾರೆ. ಪೊಲೀಸರು ಲಘು ಲಾಠಿ ಪ್ರಹಾರವನ್ನೂ ನಡೆಸಿ ಗುಂಪನ್ನು ಚದುರಿಸಿದ್ದಾರೆ.
ದತ್ತಪೀಠದಲ್ಲಿ ಮತ್ತೊಂದು ಕೋಮಿನ ಭಾವನೆಗೆ ದಕ್ಕೆ ತಂದಿದ್ರಿಂದ ಇದೀಗ ಚಿಕ್ಕಮಗಳೂರು ಬೂದಿಮುಚ್ಚಿದ ಕೆಂಡದಂತಾಗಿದೆ. ಯಾಕಂದ್ರೆ, ಬೈಕಿನಲ್ಲಿ ಬರುತ್ತಿದ್ದ ಇಬ್ಬರು ಯುವಕರ ಮೇಲೆ ಮತ್ತೊಂದು ಕೋಮಿನ ಯುವಕರು ಹಲ್ಲೆ ಮಾಡಿ ಬೈಕನ್ನು ಪುಡಿ ಮಾಡಿದ್ದಾರೆ. ಖಾಸಗಿ ಬಸ್ ಮೇಲೆ ಕಲ್ಲೂ ತೂರಾಟ ನಡೆಸಿದ್ದಾರೆ.
ಕ್ರಮೇಣ ಚಿಕ್ಕಮಗಳೂರಿನಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗ್ತಿದ್ದು, ನಗರದ ಉಪ್ಪಳ್ಳಿ, ಆಲೇನಹಳ್ಳಿ, ಹೌಸಿಂಗ್ ಬೋರ್ಡ್, ಐಜಿ ರೋಡ್, ಮಾರ್ಕೆಟ್‍ನಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ದತ್ತಪೀಠದಲ್ಲಿದ್ದ ಎಸ್ಪಿ ಅಣ್ಣಾಮಲೈ ವಿಷಯ ತಿಳಿದು ನಗರಕ್ಕೆ ಬಂದು ಮಾರ್ಕೆಟ್ ರಸ್ತೆ, ಉಪ್ಪಳ್ಳಿಯಲ್ಲಿ ಯಾರೂ ನಿಲ್ಲದಂತೆ ಎಚ್ಚರಿಸುತ್ತಿದ್ದಾರೆ. ದತ್ತಪೀಠದಿಂದ ಬರುತ್ತಿರುವ ವಾಹನಗಳ ಮೇಲೆ ಮತ್ತೊಂದು ಕೋಮಿನ ಯುವಕರು ಗಿಡ-ಗಂಟೆಗಳ ಮಧ್ಯೆ ನಿಂತು ಕಲ್ಲು ಹೊಡೆಯುತ್ತಿದ್ದಾರೆ. ಚಿಕ್ಕಮಗಳೂರು ಅಕ್ಷರಶಃ ಬೂದಿಮುಚ್ಚಿದ ಕೆಂಡದಂತಾಗಿದೆ. ದತ್ತಪೀಠದಿಂದ ಬರುತ್ತಿರುವ ದತ್ತಮಾಲಾಧಾರಿಗಳ ವಾಹನಗಳನ್ನು ಪೊಲೀಸರ ಸರ್ಪಗಾವಲಲ್ಲಿ ನಗರ ದಾಟಿಸಲಾಗುತ್ತಿದೆ.
ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಮುಂಜಾಗೃತ ಕ್ರಮವಾಗಿ ಎಷ್ಟೇ ಕ್ರಮಕೈಗೊಂಡಿದ್ದರೂ ಚುನಾವಣೆ ವರ್ಷದ ದತ್ತಜಯಂತಿಯಲ್ಲಿ ನಡೆಯಬಾರದ್ದೆಲ್ಲಾ ನಡೆದಿದೆ. ಆದರೆ ಇಂತಹ ಸೂಕ್ಷ್ಮ ಪ್ರದೇಶದಲ್ಲೇ ಇದ್ದ ಜಿಲ್ಲಾಧಿಕಾರಿ, ಎಸ್ಪಿ ಹಾಗೂ ಐಜಿಪಿ ಏನ್ ಮಾಡುತ್ತಿದ್ದರು ಅನ್ನೋದು ರಾಜ್ಯದ ಜನಕ್ಕೆ ಉತ್ತರ ಸಿಗದ ಪ್ರಶ್ನೆಯಾಗಿದೆ. ಈ ಘಟನೆಯ ಮೂಲಕ 11 ದಿನಗಳಿಂದ ನಡೆಯುತ್ತಿದ್ದ ದತ್ತಜಯಂತಿ ಕಾರ್ಯಕ್ರಮಕ್ಕೆ ತೆರೆ ಬಿದ್ದಿದೆ.