– ಮಂಡ್ಯದಲ್ಲಿ 38 ರೌಡಿಗಳನ್ನ ಗಡಿಪಾರು ಮಾಡಲು ನಿರ್ಧಾರ
ಮಂಡ್ಯ: ಇತ್ತೀಚಿನ ದಿನಗಳಲ್ಲಿ ಸಕ್ಕರೆ ನಾಡು ಮಂಡ್ಯ ಪುಡಿ ರೌಡಿಗಳ ಅಟ್ಟಹಾಸಕ್ಕೆ ನಲುಗಿದ್ದು, ಕಳೆದೆರಡು ತಿಂಗಳಿಂದ ಒಂದಲ್ಲಾ ಒಂದು ಅಪರಾಧ ಪ್ರಕರಣಗಳು ನಡೆಯುತ್ತಲೇ ಇದೆ. ಇದೀಗ ಇಂತಹ ಅಪರಾಧ ಪ್ರಕರಣಗಳು ತಡೆಗಟ್ಟಲು ಪೊಲೀಸ್ ಇಲಾಖೆ ಮಾಸ್ಟರ್ ಪ್ಲಾನ್ ರೆಡಿ ಮಾಡಿದೆ. ಜಿಲ್ಲಾಡಳಿತ ಜೊತೆ ಸೇರಿ ಜಿಲ್ಲೆಯ ರೌಡಿಶೀಟರ್‌ಗಳನ್ನ ಗಡಿಪಾರು ಮಾಡುವ ಮೂಲಕ ಜಿಲ್ಲೆಯಲ್ಲಿ ಶಾಂತಿ ಕಾಪಾಡಲು ಮುಂದಾಗಿದೆ.
Advertisement
ಕಳೆದೆರಡು ತಿಂಗಳಿನಿಂದ ಅಪರಾಧ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಾಗಿವೆ. ಕಳೆದ ಡಿಸೆಂಬರ್ ನಿಂದ ಮಂಡ್ಯದಲ್ಲಿ ಕ್ಷುಲ್ಲಕ ಕಾರಣಕ್ಕೆ 5ಕ್ಕೂ ಹೆಚ್ಚು ಕೊಲೆ, 10ಕ್ಕೂ ಹೆಚ್ಚು ದರೋಡೆ ಪ್ರಕರಣಗಳು ಮತ್ತು ಹಲವು ಸರಗಳ್ಳತನ ಪ್ರಕರಣಗಳು ವರದಿಯಾಗಿವೆ. ಇದರಿಂದ ಸಾರ್ವಜನಿಕರ ನೆಮ್ಮದಿ ಕೆಟ್ಟಿದೆ. ಅಪರಾಧ ಪ್ರಕರಣಗಳು ಜಿಲ್ಲೆಯಲ್ಲಿ ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದೆ. ಹೀಗಾಗಿ ಜಿಲ್ಲಾ ವ್ಯಾಪ್ತಿಯ 38 ರೌಡಿಶೀಟರ್‌ಗಳನ್ನು ಗಡಿಪಾರು ಮಾಡುವಂತೆ ಮಂಡ್ಯ ಎಸ್‍ಪಿ ಪರಶುರಾಮ್ ಜಿಲ್ಲಾಧಿಕಾರಿ ವೆಂಕಟೇಶ್‍ರವರಿಗೆ ಮನವಿ ಮಾಡಿದ್ದಾರೆ.
Advertisement
ಈ ಬಗ್ಗೆ ಮಾತನಾಡಿರುವ ಜಿಲ್ಲಾಧಿಕಾರಿ ವೆಂಕಟೇಶ್, ಇತ್ತೀಚೆಗೆ ಜಿಲ್ಲೆಯಲ್ಲಿ ಅಪರಾಧ ಜಾಸ್ತಿಯಾಗಿದೆ. ಸಾರ್ವಜನಿಕರ ಶಾಂತಿ ಕಾಪಾಡುವ ಸಲುವಾಗಿ ರೌಡಿಶೀಟರ್‌ಗಳನ್ನು ಗಡಿಪಾರು ಮಾಡಲು ನಿರ್ಧರಿಸಲಾಗಿದೆ. ಈಗಾಗಲೇ ವಿಚಾರಣೆ ಆರಂಭಿಸಲಾಗಿದ್ದು, ಗಡಿಪಾರಿನ ಅವಧಿ ಹಾಗೂ ಗಡಿಪಾರು ವಾಪಸ್ ಪಡೆಯುವ ಬಗ್ಗೆ ತೀರ್ಮಾನಿಸಲಾಗುವುದು ಎಂದಿದ್ದಾರೆ.
Advertisement
Advertisement
ಜಿಲ್ಲಾಧಿಕಾರಿ ಗಡಿಪಾರು ಆದೇಶ ಮಾಡುವ ಮುನ್ನವೇ ರೌಡಿಶೀಟರ್ ಓರ್ವನಿಗೆ ಕೆ.ಆರ್ ಪೇಟೆ ಪಿಎಸ್‍ಐ ಬೆವರಿಳಿಸಿದ್ದಾರೆ. ಶ್ರೀಮಂತರನ್ನು ಬೆದರಿಸಿ ಹಣವಸೂಲಿ ಮಾಡುತ್ತಿದ್ದ ಆರೋಪದ ಮೇಲೆ ಬಂಧಿಸಿದ್ದ ಆರೋಪಿಗೆ ಇನ್ಸ್‌ಪೆಕ್ಟರ್ ಬ್ಯಾಟರಾಯಗೌಡ ವಾರ್ನಿಂಗ್ ಕೊಟ್ಟಿದ್ದಾರೆ. ಬದಲಾಗದಿದ್ದರೆ ಎನ್‍ಕೌಂಟರ್ ಲಿಸ್ಟ್‌ಗೆ ಸೇರಿಸಿ ಮುಗಿಸಿಬಿಡುತ್ತೀನಿ. ಇದು ಓಲ್ಡ್ ಪೊಲೀಸಿಂಗ್ ಅಲ್ಲ ಅಂತ ವಾರ್ನ್ ಮಾಡಿದ್ದಾರೆ. ವಾರ್ನ್ ಮಾಡುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪಿಎಸ್‍ಐ ಬ್ಯಾಟರಾಯಗೌಡಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.