– ಪ್ರತ್ಯೇಕ ಚೆಕ್‌ಪೋಸ್ಟ್ ತೆರೆಯಲು ಪೊಲೀಸರು ಸಿದ್ಧತೆ
ಕಾರವಾರ: ರಾಜ್ಯದಲ್ಲಿ ಅಬಕಾರಿ ಕಿಕ್‌ಬ್ಯಾಕ್ ಗಲಾಟೆ ತಣ್ಣಗಾಗುವುದರೊಳಗೆ ಕರ್ನಾಟಕ-ಗೋವಾ ಗಡಿಯಲ್ಲಿ ಜಂಟಿ ಕಾರ್ಯಾಚರಣೆ, ತಪಾಸಣೆ ಮಾಡುತ್ತಿದ್ದ ಪೊಲೀಸ್ ಇಲಾಖೆ ಪ್ರತ್ಯೇಕ ಚೆಕ್‌ಪೋಸ್ಟ್ ತೆರೆಯಲು ಮುಂದಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಗೋವಾ ಗಡಿಯಲ್ಲಿರುವ ಅಬಕಾರಿ ಇಲಾಖೆಯ ನೇತೃತ್ವದ, ಜಿಲ್ಲೆಯ ಎರಡು ಸಂಯುಕ್ತ ತನಿಖಾ ಠಾಣೆಗಳಿಂದ ಪೊಲೀಸ್ ಇಲಾಖೆ ಬೇರ್ಪಟ್ಟಿದೆ. ಒಂದೆಡೆ ರಾಜ್ಯದಲ್ಲಿ ಅಬಕಾರಿ ಕಿಕ್‌ಬ್ಯಾಕ್ ಗಲಾಟೆ ಎದ್ದಿದೆ. ಕಾಕತಾಳೀಯ ಎಂಬಂತೆ ಉತ್ತರ ಕನ್ನಡ ಜಿಲ್ಲೆಯಲ್ಲೂ ಅಬಕಾರಿ, ಪೊಲೀಸ್ ನಡುವೆ ವೈಮನಸ್ಸು ಮೂಡಿದೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರವಾರ ತಾಲೂಕಿನ ಮಾಜಾಳಿ, ರಾಷ್ಟ್ರೀಯ ಹೆದ್ದಾರಿ-4ಎ, ಅನಮೋಡದಲ್ಲಿ ಅಬಕಾರಿ ಸಂಯುಕ್ತ ತನಿಖಾ ಠಾಣೆಗೆ ಪೊಲೀಸ್ ಸಿಬ್ಬಂದಿ ನಿಯೋಜನೆಯನ್ನು ಜಿಲ್ಲಾ ಪೊಲೀಸ್ ಇಲಾಖೆ ಸ್ಥಗಿತ ಮಾಡಿದೆ. ಗೋವಾ ಗಡಿಯ ಮಾಜಾಳಿ ಹಾಗೂ ರಾಮನಗರದ ಅನಮೋಡದಲ್ಲಿ ಅಕ್ರಮ ಗೋವಾ ಮದ್ಯ ಸಾಗಾಟ ಹೆಚ್ಚಾಗಿದೆ. ಅಬಕಾರಿ ಸಿಬ್ಬಂದಿ ಮಾಡುವ ತಪ್ಪುಗಳು ಪೊಲೀಸ್ ಇಲಾಖೆ ಮೇಲೂ ಬರುತ್ತಿದೆ. ಮಾದಕ ವಸ್ತುಗಳ ಬಗ್ಗೆ ಹಾಗೂ ಅಪರಾಧಿಗಳ ವಾಹನ ಟ್ರಾö್ಯಕಿಂಗ್‌ಗೂ ಅಬಕಾರಿ ಇಲಾಖೆಯನ್ನು ಆಶ್ರಯಿಸಬೇಕಿದೆ. ಈ ಕಾರಣ ಹೆಚ್ಚಿನ ತಪಾಸಣೆ ನಿಗಾ ಇಡಲು, ಪೊಲೀಸ್ ಇಲಾಖೆ ಈಗಿರುವ ಚೆಕ್‌ಪೋಸ್ಟ್ನಿಂದ ಪ್ರತ್ತೇಕವಾಗಿ ಇನ್ನೊಂದು ತಿಂಗಳಲ್ಲಿ ಚೆಕ್‌ಪೋಸ್ಟ್ ನಿರ್ಮಿಸಿ ಪ್ರತ್ಯೇಕ ತನಿಖೆ ಮತ್ತು ತಪಾಸಣೆ ಕೈಗೊಳ್ಳಲಿದೆ.
ಕೆಲ ದಿನಗಳ ಹಿಂದೆ ಮಾಜಾಳಿಯ ತನಿಖಾ ಠಾಣೆಯಲ್ಲಿ ಅಕ್ರಮ ಮದ್ಯ ತಪಾಸಣೆಯ ನೆಪದಲ್ಲಿ ಅಬಕಾರಿ ಇನ್‌ಸ್ಪೆಕ್ಟರ್ ಚಾಲಕನೊಬ್ಬನ ಮೇಲೆ ಹಲ್ಲೆ ನಡೆಸಿದ ವೀಡಿಯೋ ವೈರಲ್ ಆಗಿತ್ತು. ಅಬಕಾರಿ ಇನ್‌ಸ್ಪೆಕ್ಟರ್ ಸದಾಶಿವ ಕೊರ್ತಿ ಹಾಗೂ ಸಿಬ್ಬಂದಿ ಹೇಮಚಂದ್ರ ವಿರುದ್ಧ ಚಿತ್ತಾಕುಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ರಾಜ್ಯ ಲಾರಿ ಮಾಲೀಕರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದ್ದರು. ಅಬಕಾರಿ ಇನ್‌ಸ್ಪೆಕ್ಟರ್ ಹಾಗೂ ಸಿಬ್ಬಂದಿಯನ್ನು ಅಮಾನತು ಮಾಡಲಾಗಿತ್ತು. ಈ ಘಟನೆಯ ನಂತರ ಮಾಜಾಳಿಯಲ್ಲಿ ಅಬಕಾರಿ, ಪೊಲೀಸರ ನಡುವೆ ವೈಮನಸ್ಸು ಮೂಡಿತ್ತು.
ದೇಶದ ಇತರ ವಿವಿಧ ರಾಜ್ಯಗಳಿಗೆ ಹೋಲಿಸಿದರೆ ಗೋವಾದಲ್ಲಿ ಮದ್ಯದ ಮೇಲಿನ ಸುಂಕ ಅತಿ ಕಡಿಮೆ ಇದೆ. ಇದರಿಂದ ಗೋವಾದಿಂದ ರಸ್ತೆ, ರೈಲು ಹಾಗೂ ಜಲ ಮಾರ್ಗವಾಗಿ ದೊಡ್ಡ ಪ್ರಮಾಣದಲ್ಲಿ ಮದ್ಯ ಕರ್ನಾಟಕ ಸೇರಿ ಬೇರೆ ರಾಜ್ಯಗಳಿಗೆ ಸಾಗಣೆಯಾಗುತ್ತವೆ. ಪರಿಣಾಮ ಕರ್ನಾಟಕದ ಮದ್ಯದ ಆದಾಯದ ಮೇಲೆ ಭಾರಿ ಹೊಡೆತ ಬೀಳುತ್ತಿರುವ ಆರೋಪವಿದೆ. ಇದರ ಮಾಹಿತಿ ಪಡೆದ ಸಿಎಂ ಸಿದ್ದರಾಮಯ್ಯ ಅವರು ಎರಡು ಬಾರಿ ಸಭೆ ನಡೆಸಿ ಅಕ್ರಮ ತಡೆಗೆ ಕಟ್ಟುನಿಟ್ಟಿನ ಸೂಚನೆಯನ್ನು ಅಬಕಾರಿ ಅಧಿಕಾರಿಗಳಿಗೆ ನೀಡಿದ್ದರು. ಪ್ರಮುಖವಾಗಿ ರಾಷ್ಟ್ರೀಯ ಹೆದ್ದಾರಿ-66 ಹಾಗೂ 4-ಎದಲ್ಲಿರುವ ಮಾಜಾಳಿ ಹಾಗೂ ಅನಮೋಡ ತನಿಖಾ ಠಾಣೆಗಳಲ್ಲಿ ಅಕ್ರಮ ಗೋವಾ ಮದ್ಯ ತುಂಬಿದ ಲಾರಿ, ಬಸ್‌ಗಳು, ದುಬಾರಿ ಕಾರುಗಳು ಸಿಕ್ಕಿ ಹಾಕಿಕೊಳ್ಳುತ್ತವೆ. ಚೆಕ್‌ಪೋಸ್ಟ್‌ನಲ್ಲಿ ಅಕ್ರಮ ಮದ್ಯ ತಡೆಯುವ ನೆಪದಲ್ಲಿ ಕ್ಯಾಮೆರಾ ಕಣ್ಣು ತಪ್ಪಿಸಿ, ಭಾರಿ ಪ್ರಮಾಣದ ಗೋಲ್‌ಮಾಲ್ ನಡೆಯುತ್ತೆ ಎಂಬ ಆರೋಪ ಮೊದಲಿನಿಂದಲೂ ಕೇಳಿ ಬರುತ್ತಿದೆ. ಈ ತನಿಖಾ ಠಾಣೆಗಳು ಚಿನ್ನದ ಮೊಟ್ಟೆ ಇಡುವ ಕೋಳಿ ಎಂಬ ಸುದ್ದಿ ಪೊಲೀಸ್ ಹಾಗೂ ಅಬಕಾರಿ ಇಲಾಖೆ ವಲಯದಲ್ಲಿದೆ. ಇಲ್ಲಿಗೆ ಕರ್ತವ್ಯಕ್ಕೆ ನೇಮಕ ಮಾಡಿಸಿಕೊಳ್ಳಲು ಎರಡೂ ಇಲಾಖೆಯಲ್ಲಿ ಭಾರಿ ಪೈಪೋಟಿ ನಡೆಯುತ್ತಿತ್ತು. ಆದರೆ, ಇದೀಗ ಈ ಎಲ್ಲಾ ಕಾರಣಗಳು ಅಬಕಾರಿ ಇಲಾಖೆಯಿಂದ ಪೊಲೀಸ್ ಇಲಾಖೆ ಬೇರ್ಪಡಲು ಪ್ರಮುಖ ಕಾರಣವಾಗಿದೆ.
ಕಳೆದ 10 ದಿನಗಳಿಂದ ಮಾಜಾಳಿ ಹಾಗೂ ಅನಮೋಡ ತನಿಖಾ ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯಕ್ಕೆ ಪೊಲೀಸ್ ಇಲಾಖೆ ನಿಯೋಜಿಸಿಲ್ಲ. ಕಳೆದ ಐದು ವರ್ಷದ ಹಿಂದೆ ಚೆಕ್‌ಪೋಸ್ಟ್ನಲ್ಲಿ ಲಕ್ಷಾಂತರ ಹಣ ವ್ಯಯಿಸಿ, ನವೀಕರಿಸಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿತ್ತು. ಅಬಕಾರಿ, ಅರಣ್ಯ, ಪೊಲೀಸ್, ಗಣಿ ಇಲಾಖೆ ಒಟ್ಟಾಗಿ ಹಿಂದಿನಿಂದ ಇಲ್ಲಿ ಕೆಲಸ ಮಾಡುತ್ತಾ ಬಂದಿವೆ. ಹೀಗಿರುವಾಗ ಇತ್ತೀಚೆಗೆ ನಡೆದ ಬೆಳವಣಿಗೆಯಿಂದ ಪೊಲೀಸ್ ಇಲಾಖೆ ತನ್ನದೇ ಪ್ರತ್ಯೇಕ ತನಿಖಾ ಠಾಣೆ ನಿರ್ಮಿಸಲು ಮುಂದಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.