ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ದಿನೇ ದಿನೇ ಸೈಬರ್ ಕ್ರೈಂಗಳು ಹೆಚ್ಚಾಗುತ್ತಲೇ ಇದೆ. ಆದರೆ ಈ ಪ್ರಕರಣ ದಾಖಲಿಸಿಕೊಳ್ಳಲು ಒಂದೇ ಸೈಬರ್ ಕ್ರೈಂ ಪೊಲೀಸ್ ಠಾಣೆ ಇರುವ ಕಾರಣಕ್ಕೆ ಹೊಸ ಸೈಬರ್ ಪೊಲೀಸ್ ಠಾಣೆಗಳನ್ನ ತೆರೆಯುವ ಚಿಂತನೆ ನಡೆಯುತ್ತಿದೆ.
ಟೆಕ್ನಾಲಜಿ ಮುಂದುವರಿದಂತೆ ಆನ್‍ಲೈನ್ ವಂಚಕರು, ಸಾಮಾಜಿಕ ಜಾಲಾತಣದಲ್ಲಿ ಹೆಣ್ಣು ಮಕ್ಕಳಿಗೆ ಕಿರುಕುಳ ಪ್ರಕರಣ ಹೀಗೆ ಹಲವು ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಈ ಪ್ರಕರಣಗಳು ಸೈಬರ್ ಕ್ರೈಂ ವ್ಯಾಪ್ತಿಗೆ ಬರುವುದರಿಂದ ಪ್ರತಿನಿತ್ಯ 30 ರಿಂದ 40 ಬೇರೆ ಬೇರೆ ಪ್ರಕರಣಗಳು ಸೈಬರ್ ಕ್ರೈಂ ಠಾಣೆಯಲ್ಲಿ ದಾಖಲಾಗುತ್ತಿವೆ. ನಗರದಲ್ಲಿ ಒಂದೇ ಸೈಬರ್ ಕ್ರೈಂ ಠಾಣೆ ಇರುವುದರಿಂದ ದಾಖಲಾಗಿರುವ ದೂರುಗಳನ್ನ ಬೇಧಿಸಲು ಸಾಕಷ್ಟು ವಿಳಂಬವಾಗುತ್ತಿದೆ.
Advertisement
Advertisement
ಅನ್ಯಾಯಕ್ಕೆ ಒಳಗಾಗಿರುವವರಿಗೆ ನ್ಯಾಯ ದೊರಕಿಸಿಕೊಡಲು ಬೆಂಗಳೂರಿನ ಬೇರೆ ಬೇರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೈಬರ್ ಕ್ರೈಂ ಪೊಲೀಸ್ ಠಾಣೆಯನ್ನ ಮಾಡಲು ಸರ್ಕಾರಕ್ಕೆ ಅನುಮತಿ ಕೇಳಲಾಗಿದೆ. ಸರ್ಕಾರ ಕೂಡ ಬಜೆಟ್‍ನಲ್ಲಿ ಸೈಬರ್ ಕ್ರೈಂ ಪೊಲೀಸ್ ಠಾಣೆಗಳ ನಿರ್ಮಾಣಕ್ಕೆ ಅನುವು ಮಾಡಿಕೊಟ್ಟಿದೆ ಎನ್ನಲಾಗಿದೆ. ಈಗಿರುವ ಸೈಬರ್ ಪೊಲೀಸ್ ಠಾಣೆ ಸೇರಿದಂತೆ ಹೊಸದಾಗಿ ಎಂಟು ಸೈಬರ್ ಪೊಲೀಸ್ ಠಾಣೆಯನ್ನ ತೆರೆಯಲು ಪೊಲೀಸ್ ಇಲಾಖೆ ಚಿಂತನೆ ನಡೆಸಿದೆ.