ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿ ತಿಂಗಳಿಗೆ ಒಬ್ಬ ಪೊಲೀಸ್ ಸಿಬ್ಬಂದಿ ಐದು ಪ್ರಕರಣವನ್ನು ಕಡ್ಡಾಯವಾಗಿ ದಾಖಲಿಸಬೇಕೆಂದು ಪೊಲೀಸ್ ಇಲಾಖೆ ಹೊಸ ನಿಯಮವನ್ನು ರೂಪಿಸಿದೆ.
ಪೊಲೀಸರು ಜಾಗೃತೆಯಿಂದ ಕೆಲಸ ಮಾಡಲು ಈ ನಿಯಮವನ್ನು ಕರ್ನಾಟಕ ಪೊಲೀಸ್ (ಕೆಪಿ) ಕಾಯ್ದೆಯ ಅಡಿಯಲ್ಲಿ ಜಾರಿ ಮಾಡಲಾಗಿದೆ. ಪೇದೆ, ಮುಖ್ಯಪೇದೆ, ಎಎಸ್‍ಐ, ಪಿಎಸ್‍ಐ, ಇನ್ಸ್ಪೆಕ್ಟರ್ ಗೂ ಈ ನಿಯಮ ಅನ್ವಯವಾಗಲಿದ್ದು, ಈಗ ಈ ನಿಯಮದ ಸಾಧಕ ಬಾಧಕದ ಬಗ್ಗೆ ಚರ್ಚೆ ಆರಂಭವಾಗಿದೆ.
Advertisement
ಪ್ರಕರಣ ದಾಖಲಿಸದಿದ್ದರೆ ಏನಾಗುತ್ತೆ?
ಒಂದು ವೇಳೆ ತಿಂಗಳಿಗೆ ಐದು ಪ್ರಕರಣ ದಾಖಲಿಸದಿದ್ದಲ್ಲಿ ಇಎಲ್, ಸಿಎಲ್ ರಜೆಗೆ ಕತ್ತರಿ ಹಾಕುವ ನಿರ್ಧಾರವನ್ನು ಇಲಾಖೆ ತಗೆದುಕೊಂಡಿದೆ. ಹೀಗಾಗಿ ಪ್ರತಿಯೊಬ್ಬ ಪೊಲೀಸ್ ಸಿಬ್ಬಂದಿ ತಿಂಗಳಲ್ಲಿ ದಾಖಲು ಮಾಡಿದ ಪ್ರಕರಣದ ಬಗ್ಗೆ ಮಾಹಿತಿ ಇಟ್ಟಿರಬೇಕು. ಪ್ರತಿ ತಿಂಗಳ ಅಂತ್ಯಕ್ಕೆ ಯಾರು ಎಷ್ಟು ಪ್ರಕರಣ ದಾಖಲಿಸಿದ್ದಾರೆ ಎನ್ನುವ ಮಾಹಿತಿಯನ್ನು ಡಿಜಿಪಿ ಕಚೇರಿಗೆ ಕಳುಹಿಸಿಕೊಡಬೇಕು. ಪ್ರಕರಣ ದಾಖಲಿಸುವಲ್ಲಿ ವಿಫಲರಾದ ಸಿಬ್ಬಂದಿಗೆ ರಜೆ ನೀಡದಂತೆ ಘಟಕದ ಮುಖ್ಯಸ್ಥರಿಗೆ ಇಲಾಖೆ ಖಡಕ್ ಎಚ್ಚರಿಕೆ ನೀಡಿದೆ.
Advertisement
Advertisement
ನಿಯಮದ ಅನುಕೂಲಗಳೇನು?
ಪೊಲೀಸರ ಕಾರ್ಯವೈಖರಿಯ ಬಗ್ಗೆ ಸದಾ ನಿಗಾ ವಹಿಸಬಹುದಾಗಿದೆ. ರಾಜಿ-ಸಂಧಾನದ ಹೆಸರಿನಲ್ಲಿ ನಡೆಯುತ್ತಿರುವ ವಸೂಲಿ ಮಾಡುವುದನ್ನು ತಡೆಯಬಹುದು. ಪೊಲೀಸರು ಸಹ ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಾರೆ. ಸದಾ ಪೊಲೀಸರು ಅಲರ್ಟ್ ಆಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಾರೆ ಹಾಗೂ ಹಿರಿಯ ಅಧಿಕಾರಿಗಳ ಕಣ್ಣಳತೆಯಲ್ಲಿ ಕೆಲಸ ಮಾಡುತ್ತಿರುತ್ತಾರೆ. ಅಷ್ಟೇ ಅಲ್ಲದೇ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಇದು ಸಹಕಾರಿಯಾಗುತ್ತದೆ.
Advertisement
ಅನಾನುಕೂಲಗಳೇನು?
ಎಲ್ಲಾ ಸಮಯದಲ್ಲೂ ಹಾಗೂ ಎಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಅಸಾಧ್ಯ. ಬೆಂಗಳೂರಿನಂತ ನಗರಗಳಲ್ಲಿ ಮಾತ್ರ ಪ್ರಕರಣ ದಾಖಲಿಸಲು ಸಾಧ್ಯ. ಗ್ರಾಮೀಣ ಭಾಗದ ಠಾಣೆಗಳಲ್ಲಿ ಪ್ರಕರಣ ದಾಖಲಾಗುವುದು ತೀರಾ ಕಡಿಮೆ. ನಿಯಮಕ್ಕೆ ಹೆದರಿ ಸುಖಾಸುಮ್ಮನೆ ಪ್ರಕರಣ ದಾಖಲಿಸಬೇಕಾಗುತ್ತದೆ. ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಮಾರಕವಾಗುವ ಸಾಧ್ಯತೆ. ಚಿಕ್ಕ ಪುಟ್ಟ ಘಟನೆಗಳಿಗೂ ಪ್ರಕರಣ ದಾಖಲಿಸಿದರೆ ಇಲಾಖೆಗೆ ಕೆಟ್ಟ ಹೆಸರು ಬರುತ್ತದೆ. ಅಷ್ಟೇ ಅಲ್ಲದೇ ಕಡ್ಡಾಯವಾಗಿ ಪ್ರಕರಣ ದಾಖಲಿಸಲೇಬೇಕು ಎಂಬ ಮಾನಸಿಕ ಒತ್ತಡದಲ್ಲಿ ಸಿಬ್ಬಂದಿ ಕೆಲಸ ಮಾಡಬೇಕಾಗುತ್ತದೆ.
ಯಾವ ಕೇಸ್ ದಾಖಲಿಸಬಹುದು?
ಸಂಚಾರ ನಿಯಮ ಉಲ್ಲಂಘನೆ, ಸಾರ್ವಜನಿಕ ಸ್ಥಳಗಳಲ್ಲಿ ಗಲಾಟೆ, ಶಾಂತಿಭಂಗ, ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುವುದು, ಕೊಲೆಯ ಉದ್ದೇಶದಿಂದ ಮಾರಣಾಂತಿಕ ಹಲ್ಲೆ, ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ, ಯುವತಿ ಮತ್ತು ಮಹಿಳೆಯರ ಜೊತೆ ಅನುಚಿತ ವರ್ತನೆ, ಚುಡಾಯಿಸುವುದು ಹಾಗೂ ಗುಂಪುಗೂಡಿ ದೊಂಬಿಗಳನ್ನು ನಡೆಸಿದರೆ ಪ್ರಕರಣ ದಾಖಲಿಸಬಹುದು.