Friday, 20th July 2018

Recent News

ಇಸ್ಪೀಟ್ ಅಡ್ಡೆ ಮೇಲೆ ದಾಳಿ ಮಾಡಿದ್ದಕ್ಕೆ ಪೊಲೀಸರ ಮೇಲೆಯೇ ಹಲ್ಲೆ- ಪುಡಿರೌಡಿಗಳ ಅಟ್ಟಹಾಸಕ್ಕೆ ಓಡಿಹೋದ ಪೇದೆಗಳು

ಬೆಂಗಳೂರು: ಇಸ್ಪೀಟ್ ಅಡ್ಡೆ ಮೇಲೆ ದಾಳಿ ಮಾಡಿದಕ್ಕೆ ಇಬ್ಬರು ಪೊಲೀಸ್ ಪೇದೆಗಳ ಮೇಲೆ ಹಾಡಹಗಲೇ ಆರೋಪಿಗಳು ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ವರ್ತೂರು ಮುಖ್ಯರಸ್ತೆಯ ಸಿದ್ದಾಪುರ ಬಳಿ ಭಾನುವಾರ ಮಧ್ಯಾಹ್ನ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ಕುಮಾರ್, ಸುದೀಪ್, ಮೂರ್ತಿ, ಮುರಳಿ ಮೋಹನ್ ಎಂಬ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ವರ್ತೂರು ಬಸಪ್ಪ ಗಾಣೆಗಾರ, ಶರಣಬಸಪ್ಪ ಎಂಬಿಬ್ಬರು ಪೊಲೀಸರನ್ನು ಅಟ್ಟಾಡಿಸಿ ಹಲ್ಲೆ ಮಾಡಿದ್ದಾರೆ. ತಮ್ಮ ಮೇಲೆ ಹಲ್ಲೆ ನಡೆಯುತ್ತಿದ್ದಂತೆಯೇ ಪೊಲೀಸರು ಸ್ಥಳದಿಂದ ಕಾಲ್ಕಿತ್ತು ದುಷ್ಕರ್ಮಿಗಳ ಕೈಯಿಂದ ತಪ್ಪಿಸಿಕೊಂಡಿದ್ದಾರೆ. ಈ ಸಂಬಂಧ ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಪೊಲೀಸ್ ಪೇದೆಗಳ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೈಟ್ ಫೀಲ್ಡ್ ಡಿಸಿಪಿ ಅಬ್ದುಲ್ ಅಹದ್ ಮಾತನಾಡಿ, ಭಾನುವಾರ ಮಧ್ಯಾಹ್ನ ವೈಟ್ ಫೀಲ್ಡ್ ಪೊಲೀಸ್ ಸಿಬ್ಬಂದಗಳಾದ ಬಸಪ್ಪ ಗಾಣಿಗೇರ ಮತ್ತು ಶರಣಬಸಪ್ಪ ಬೀಟ್ ನಲ್ಲಿದ್ದರು. ಈ ವೇಳೆ ಅವರು ಜೂಜಾಟದ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ್ದಾರೆ. ಇಸ್ಪಿಟ್ ಅಡ್ಡೆಯಲ್ಲಿ ಎಷ್ಟು ಜನ ಇದ್ದಾರೆಂಬ ಮಾಹಿತಿ ಪೇದೆಗಳಿಗೆ ಇರಲಿಲ್ಲ. ಹೀಗಾಗಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ ತಕ್ಷಣವೇ ಕುಡಿದ ಮತ್ತಿನಲ್ಲಿದ್ದ ಆರೋಪಿಗಳು ಪೊಲೀಸರನ್ನು ತಳ್ಳಾಡಿ, ಹಲ್ಲೆ ಮಾಡಿದ್ದಾರೆ. ಈ ಸುದ್ದಿ ತಿಳಿದ ತಕ್ಷಣ ಮತ್ತೆ ಕೆಲ ಪೊಲೀಸರು ತೆರಳಿದ್ರು. ಆದ್ರೆ ಅರೋಪಿಗಳು ಅದಾಗಲೇ ಅಲ್ಲಿಂದ ಓಡಿ ಹೋಗಿದ್ರು. ಈ ಸಂಬಂಧ ನಾಲ್ವರನ್ನು ಈಗಾಗಲೇ ಅರೆಸ್ಟ್ ಮಾಡಲಾಗಿದೆ. ಉಳಿದ ಎಂಟು ಮುಂದಿಗಾಗಿ ಹುಡುಕಾಟ ನಡೆಯುತ್ತಿದೆ. ಹಲ್ಲೆಗೊಳಗಾದವರು ವೈಟ್ ಫೀಲ್ಡ್ ಪೊಲೀಸ್ ಠಾಣೆ ಪೇದೆಗಳಾಗಿದ್ದು, ವರ್ತೂರು ವ್ಯಾಪ್ತಿಗೆ ಏಕೆ ಹೋದರು ಅನ್ನೋದು ತಿಳಿಯಬೇಕಿದೆ ಅಂತ ಅವರು ಹೇಳಿದ್ದಾರೆ.

ಘಟನೆ ಸಂಬಂಧ ಗೃಹಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ನಿನ್ನೆ ಯುಗಾದಿ ಹಬ್ಬ. ಹೀಗಾಗಿ ಮಹದೇವಪುರದಲ್ಲಿ ಕೆಲವರು ಇಸ್ಪೀಟ್ ಆಡ್ತಾ ಇದ್ದರು. ಆಗ ಇಬ್ಬರು ಪೊಲೀಸ್ ಪೇದೆಗಳು ತಡೆಯಲು ಹೋಗಿದ್ದಾರೆ. ಈ ವೇಳೆ ಅವರ ಮೇಲೆ ಹಲ್ಲೆ ನಡೆದಿದೆ. ಹಲ್ಲೆ ಮಾಡಿದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಅದರಲ್ಲಿ ಸಂದೀಪ್ ಎಂಬಾತ ಬಿಜೆಪಿ ಕಾರ್ಯಕರ್ತನಾಗಿದ್ದಾನೆ. ಆದ್ರೆ ಬಿಜೆಪಿ ಇರಲಿ, ಕಾಂಗ್ರೆಸ್, ಜೆಡಿಎಸ್ ಯಾವುದೇ ಪಕ್ಷದವರಾಗಿರಲಿ ಹಲ್ಲೆ ಮಾಡಿರುವುದು ತಪ್ಪು. ಹೀಗಾಗಿ ಅವರನ್ನು ಈಗಾಗಲೇ ಬಂಧಿಸಲಾಗಿದೆ. ಪೇದೆಗಳ ಬಳಿ ಬಂದೂಕು ಇರಲ್ಲ, ಲಾಠಿ ಇರುತ್ತೆ. ಈ ಹಿನ್ನೆಲೆಯಲ್ಲಿ ಆರೋಪಿಗಳಿಂದಾದ ಹಲ್ಲೆ ತಡೆಯಲು ಆಗಿಲ್ಲ. ಕುಡಿದ ಮತ್ತಿನಲ್ಲಿ ಈ ಘಟನೆ ನಡೆದಿದೆ. ಈ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ ಅಂತ ತಿಳಿಸಿದ್ದಾರೆ.

Leave a Reply

Your email address will not be published. Required fields are marked *