ಹುಬ್ಬಳ್ಳಿ: ಕುಮಾರಸ್ವಾಮಿಯವರೇ ರಾಜೀನಾಮೆ ಯಾವಾಗ ಎಂದು ಪ್ರಶ್ನಿಸಿ ಫೇಸ್‍ಬುಕ್ ನಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದ ಪೊಲೀಸ್ ಪೇದೆಯನ್ನು ಇಲಾಖೆ ಅಮಾನತು ಮಾಡಿದೆ.
ಶಹರ ಠಾಣೆಯ ಪೊಲೀಸ್ ಪೇದೆ ಅರುಣ್ ಡೊಳ್ಳಿನ್ ಫೇಸ್ ಬುಕ್ ನಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎಮ್.ಎನ್. ನಾಗರಾಜ್ ಅಮಾನತು ಮಾಡುವಂತೆ ಆದೇಶ ಹೊರಡಿಸಿದ್ದಾರೆ. ಜೊತೆಗೆ ಈ ಬಗ್ಗೆ ಇಲಾಖೆಗೆ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ.
Advertisement
Advertisement
ಬಿಜೆಪಿ ಶಿಕಾರಿಪುರ ಹೆಸರಿನಲ್ಲಿರುವ ಎಫ್‍ಬಿ ಖಾತೆಯೊಂದು ಕುಮಾರಸ್ವಾಮಿಯವರೇ ರಾಜೀನಾಮೆ ಯಾವಾಗ ಎಂದು ಬರೆದು ಒಂದು ಫೋಟೋ ಹಾಕಿ ಪೋಸ್ಟ್ ಪ್ರಕಟಿಸಿತ್ತು. ಈ ಪೋಸ್ಟ್ ಅನ್ನು ಅರುಣ್ ಡೊಳ್ಳಿನ್ ಶೇರ್ ಮಾಡಿದ್ದರು. ತನ್ನ ಖಾತೆಯಲ್ಲಿ ಬಿಜೆಪಿ ಪರವಾಗಿ ಪ್ರಚಾರ ಮಾಡಿ ಜೆಡಿಎಸ್-ಕಾಂಗ್ರೆಸ್ ವಿರುದ್ಧ ಅಪಪ್ರಚಾರದ ಪೋಸ್ಟ್, ಕಾಂಗ್ರೆಸ್ ಪಕ್ಷ ಮಹಿಳಾ ಮುಖಂಡರ ವಿರುದ್ಧ ಹಾಗೂ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳುವ ಪೋಸ್ಟ್ ಗಳನ್ನು ಶೇರ್ ಮಾಡಿದ್ದರು.
Advertisement
ಸರ್ಕಾರಿ ಸೇವೆಯಲ್ಲಿದ್ದವರು ಯಾವುದೇ ರಾಜಕೀಯ ಪಕ್ಷ, ಸಂಘಟನೆ ಮತ್ತು ಧರ್ಮದ ಪರ ಹಾಗೂ ವಿರುದ್ಧ ಕೆಲಸ ಮಾಡಬಾರದು ಎನ್ನುವ ನಿಯಮವಿದೆ. ಆದರೆ ಅರುಣ್ ಡೊಳ್ಳಿನ್ ಬಿಜೆಪಿ ಕಾರ್ಯಕರ್ತನಂತೆ ಪೋಸ್ಟ್ ಪ್ರಕಟಿಸಿದ್ದಕ್ಕೆ ಇಲಾಖೆಯಲ್ಲೇ ಅಪಸ್ವರ ಎದ್ದಿತ್ತು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಆಯುಕ್ತ ಎಮ್.ಎನ್. ನಾಗರಾಜ್ ಅವರು ಅರುಣ್ ಡೊಳ್ಳಿನ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.