ಬೆಂಗಳೂರು: ಕೋವಿಡ್ 19 ಸೋಂಕಿಗೆ ತುತ್ತಾಗಿರುವ ಬೆಂಗಳೂರಿನ ಪೊಲೀಸ್ ಪೇದೆ ಹನೂರು ತಾಲೂಕಿನ ಬೆಳ್ತೂರು ಗ್ರಾಮಕ್ಕೆ ಬಂದಿದ್ದರು ಎಂಬ ಮಾಹಿತಿ ಲಭಿಸಿದ್ದು, ಇದೀಗ ಸ್ಥಳೀಯ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಕೊರೊನಾ ಸೋಂಕಿತ ಪೊಲೀಸ್ ಪೇದೆಯ ಪ್ರಾಥಮಿಕ ಸಂಪರ್ಕಿತರ 18 ಮಂದಿಯ ಗಂಟಲು ದ್ರವ ಹಾಗೂ ರಕ್ತದ ಮಾದರಿಯನ್ನು ಪರೀಕ್ಷಾ ಕೇಂದ್ರಕ್ಕೆ ರವಾನಿಸಲಾಗಿದೆ. ಆ ಎಲ್ಲಾ ಫಲಿತಾಂಶ ನಿರೀಕ್ಷಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ ಆರ್ ರವಿ ತಿಳಿಸಿದ್ದಾರೆ.
Advertisement
ಪೇದೆಗೆ ಹೋಂ ಕ್ವಾರಂಟೈನ್‍ನಲ್ಲಿ ಇರುವಂತೆ ಸೂಚಿಸಿದ್ದರೂ ಆತ ಹನೂರಿನ ನೆಂಟರ ಮನೆಗೆ ಬಂದಿದ್ದರು. ಪರಿಣಾಮ ಇದೀಗ ಜಿಲ್ಲೆಯ ಸಾರ್ವಜನಿಕರು ಆತಂಕಗೊಂಡಿದ್ದಾರೆ. ಅಷ್ಟೇ ಅಲ್ಲದೇ ಚೆಕ್ ಪೋಸ್ಟ್ ಸಿಬ್ಬಂದಿ, ವೈನ್ ಸ್ಟೋರ್ ಗೂ ಪೇದೆ ತೆರಳಿದ್ದರು ಎಂಬ ಮಾಹಿತಿ ಎಲ್ಲೆಡೆ ರವಾನೆಯಾಗಿದ್ದು, ಪರಿಣಾಮ ಈಗಾಗಲೇ 18 ಜನರನ್ನು ಆಸ್ಪತ್ರೆ ಕ್ವಾರಂಟೈನ್ ಮಾಡಲು ಜಿಲ್ಲಾಸ್ಪತ್ರೆ ಸಿಬ್ಬಂದಿ ಕರೆದುಕೊಂಡು ಬಂದಿದ್ದಾರೆ. ಇವರಲ್ಲಿ 9 ತಿಂಗಳ ಮಗು ಇರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
Advertisement
Advertisement
ಪೇದೆಯ ಪ್ರಾಥಮಿಕ ಸಂಪರ್ಕದಲ್ಲಿದ್ದವರದಲ್ಲಿ 60 ವರ್ಷ ಮೇಲ್ಪಟ್ಟ 3 ಜನ ಹಾಗೂ 10 ವರ್ಷ ಒಳಗಿನ 4 ಮಂದಿಯನ್ನು ಕೋವಿಡ್-19 ಆಸ್ಪತ್ರೆಯಲ್ಲಿ ನಿಗಾ ಇರಿಸಲಾಗಿದೆ. ಉಳಿದವರನ್ನು ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕ್ವಾರಂಟೈನ್ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಪೊಲೀಸ್ ಇಲಾಖೆಯ ಯಾವುದೇ ಅನುಮತಿ ಪಡೆಯದೇ ಪೆ-650(40) ಜಿಲ್ಲೆಗೆ ಬಂದಿದ್ದರು. ತಾವು ಪೊಲೀಸ್ ಪೇದೆಯಾಗಿದ್ದರೂ ಮೆಡಿಕಲ್ ಪರ್ಪಸ್ ಎಂದು ಮನವಿ ಮಾಡಿಕೊಂಡು ಜಿಲ್ಲೆಗೆ ಬಂದು ಹನೂರು ತಾಲೂಕಿನ ಬೆಳತ್ತೂರು ಗ್ರಾಮದಲ್ಲಿನ ಹೆಂಡತಿ ತವರು ಮನೆಗೆ ಬಂದಿದ್ದಾರೆ ಎಂದು ತಿಳಿಸಿದರು.
Advertisement
ಗಂಟಲು ದ್ರವ ಮತ್ತು ರಕ್ತದ ಮಾದರಿಯನ್ನು ಪರೀಕ್ಷೆಗೆ ನೀಡಿದ ಬಳಿಕ ಅವರು ಬರಬಾರದಿತ್ತು. ಆದ್ದರಿಂದ ಈ ಕುರಿತು ಸೂಕ್ತ ಕ್ರಮಕ್ಕಾಗಿ ಡಿಜಿ ಅವರಿಗೆ ಪತ್ರ ಬರೆದಿರುವುದಾಗಿ ಮಾಹಿತಿ ನೀಡಿದರು. ಚೆಕ್‍ಪೋಸ್ಟ್ ನಲ್ಲಿ ಹತ್ತಿರದಿಂದ ಸಂವಹನ ನಡೆಸಿದ್ದ 5 ಮಂದಿಯನ್ನು ಕೂಡ ಕ್ವಾರಂಟೈನ್ ಮಾಡಲಾಗುವುದು. ಜೊತೆಗೆ ಬೇರೆ ಯಾರಾದರೂ ಪ್ರಾಥಮಿಕ ಸಂಪರ್ಕಕ್ಕೆ ಒಳಗಾಗಿದ್ದಾರೋ ಅವರ ಕುರಿತು ತನಿಖೆ ನಡೆಯುತ್ತಿದೆ ಎಂದರು. ಇದೊಂದು ದೊಡ್ಡ ಸವಾಲಾಗಿದ್ದು, ಧೈರ್ಯವಾಗಿ ಎದುರಿಸೋಣ. ಯಾವುದೇ ಕಾರಣಕ್ಕೂ ಜಿಲ್ಲೆಯ ಹಾಗೂ ವಿಶೇಷವಾಗಿ ಹನೂರಿನ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.