ಚಿಕ್ಕಬಳ್ಳಾಪುರ: ಶಾಲಾ-ಕಾಲೇಜು ಸಾರ್ವಜನಿಕ ಸ್ಥಳದಲ್ಲಿ ನಾಗರಿಕರಿಗೆ ರಕ್ಷಣೆ ಕೊಡಬೇಕಾದ ಪೊಲೀಸ್ ಪೇದೆಯೇ ಶಾಲಾ ಶಿಕ್ಷಕಿಯೊಂದಿಗೆ ಅಸಭ್ಯವಾಗಿ ವರ್ತಿಸಿರುವ ಘಟನೆ ಜಿಲ್ಲೆಯ ಗುಡಿಬಂಡೆ ಪಟ್ಟಣದಲ್ಲಿ ನಡೆದಿದೆ.
ಗುಡಿಬಂಡೆ ಪೊಲೀಸ್ ಠಾಣೆಯ ಗುಪ್ತವಾರ್ತೆಯ ಪೇದೆ ರಮೇಶ್ ಅನುಚಿತ ವರ್ತನೆ ತೋರಿದ ಪೇದೆ. ಇಲ್ಲಿನ ಖಾಸಗಿ ಶಾಲೆಗೆ ನುಗ್ಗಿ ಪಾಠ ಮಾಡುತ್ತಿದ್ದ ಶಿಕ್ಷಕಿಯ ಕೈ ಹಿಡಿದು ಎಳೆದಾಡಿ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಸಮ್ಮುಖದಲ್ಲೇ ಅಸಭ್ಯವಾಗಿ ವರ್ತಿಸಿದ್ದಾನೆ.
Advertisement
ಇಂದು ಬೆಳಿಗ್ಗೆ ಶಾಲೆಯ ಬಳಿ ತೆರೆಳಿದ್ದ ಪೊಲೀಸ್ ಪೇದೆ ರಮೇಶ್, ಶಿಕ್ಷಕಿಯ ಕೈಹಿಡಿದು ಎಳೆದಾಡಿ ಬಾ ಹೋಗೋಣ, ಮದುವೆಯಾಗೋಣ ಎಂದು ರಂಪಾಟ ಮಾಡಿದ್ದಾನೆ. ಇದರಿಂದ ವಿಚಲಿತಳಾದ ಶಿಕ್ಷಕಿ, ಕೈಬಿಡಿಸಿಕೊಂಡು ಶಾಲೆಯ ಮುಖ್ಯಸ್ಥರ ಕಡೆ ಓಡಿ ಬಂದಿದ್ದಾರೆ. ಅಲ್ಲಿಗೂ ಬಂದು ರಮೇಶ್ ಶಾಲಾ ಮುಖ್ಯಸ್ಥರಿಗೆ ಅವಾಜ್ ಹಾಕಿದ್ದು, ಘಟನೆ ಸಂಬಂಧ ಶಾಲಾ ಮುಖ್ಯಸ್ಥರು ಗುಡಿಬಂಡೆ ಠಾಣೆಗೆ ದೂರು ನೀಡಿದ್ದಾರೆ.
Advertisement
Advertisement
ವಿಷಯ ತಿಳಿದು ಶಿಕ್ಷಕಿಯ ಪೋಷಕರು ಶಾಲೆ ಬಳಿ ಬಂದು ನಂತರ ಗುಡಿಬಂಡೆ ಪೊಲೀಸ್ ಠಾಣೆಗೆ ತೆರಳಿ ರಮೇಶ್ ವಿರುದ್ಧ ಸಿಪಿಐ ಸುನೀಲ್‍ಗೆ ಮೌಖಿಕ ದೂರು ನೀಡಿದ್ದರು. ರಮೇಶ್ ಹೇಳುವ ಪ್ರಕಾರ, ಶಿಕ್ಷಕಿಯನ್ನು ಗಾಢವಾಗಿ ಪ್ರೀತಿಸುತ್ತಿದ್ದು, ಆಕೆಯೂ ಸಹ ತನ್ನನ್ನು ಪ್ರೀತಿಸುತ್ತಿದ್ದಾಳೆ. ಆದರೆ ಬೇರೆ ಬೇರೆ ಜಾತಿ ಎನ್ನುವ ಕಾರಣ ಆಕೆಯ ಪೋಷಕರು ನಮ್ಮ ಮದುವೆಗೆ ಒಪ್ಪುತ್ತಿಲ್ಲ ಎಂದು ತಿಳಿಸಿದ್ದಾನೆ. ಇದೇ ವೇಳೆ ಅಲ್ಲೇ ಇದ್ದ ಶಿಕ್ಷಕಿ ಸಹ ಹೌದು, ಪ್ರೀತಿ ಮಾಡುತ್ತಿದ್ದು ನಿಜ. ಆದರೆ ನಮ್ಮ ಪೋಷಕರನ್ನು ಒಪ್ಪಿಸಿ ಮದುವೆಯಾಗಬೇಕು ಎಂದು ನಿರ್ಧಾರ ಮಾಡಿದ್ದು, ಈಗ ನಮ್ಮ ಪೋಷಕರು ಮದುವೆಗೆ ಒಪ್ಪುತ್ತಿಲ್ಲ. ನನಗೂ ಈಗ ಇಷ್ಟ ಇಲ್ಲ ಎಂದು ಹೇಳಿ ಕಡ್ಡಿ ತುಂಡು ಮಾಡಿದಂತೆ ಪೊಲೀಸ್ ಪೇದೆಯ ಪ್ರೇಮಕ್ಕೆ ಫುಲ್ ಸ್ಟಾಪ್ ಇಟ್ಟಿದ್ದಾರೆ.
Advertisement
ಘಟನೆ ಬಳಿಕ ತಾನು ಶಿಕ್ಷಕಿಯ ಸಹವಾಸಕ್ಕೆ ಹೋಗೋದಿಲ್ಲ ಎಂದು ರಮೇಶ್ ಮುಚ್ಚಳಿಕೆ ಬರೆದುಕೊಟ್ಟಿದ್ದಾನೆ. ಆದರೆ ಯುವತಿ ಪೋಷಕರು ಗುಡಿಬಂಡೆ ಪೊಲೀಸ್ ಠಾಣೆಯಿಂದ ರಮೇಶ್ ನನ್ನ ವರ್ಗಾವಣೆ ಮಾಡಿ ಎಂದು ಪಟ್ಟು ಹಿಡಿದಿದ್ದು, ಎಸ್‍ಪಿ ಅವರಿಗೆ ದೂರು ನೀಡಲು ಮುಂದಾದರು. ಈ ಬಗ್ಗೆ ಸ್ಪಷ್ಟನೆ ನೀಡಿದ ಚಿಕ್ಕಬಳ್ಳಾಪುರ ಎಸ್‍ಪಿ, ಪೇದೆ ರಮೇಶ ಕೃತ್ಯ ಸರಿಯಲ್ಲ. ತಕ್ಷಣ ಆತನನ್ನು ಗುಡಿಬಂಡೆ ಠಾಣೆಯಿಂದ ವರ್ಗಾವಣೆ ಮಾಡಿ ತನಿಖೆಗೆ ಆದೇಶ ಮಾಡಿದ್ದೇವೆ. ವರದಿ ಬಂದ ನಂತರ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು.
ಪೊಲೀಸ್ ಪೇದೆ ರಮೇಶ ಹಾಗೂ ಶಿಕ್ಷಕಿಯ ಲವ್ ಸ್ಟೋರಿ ಶಾಲಾ ವಿದ್ಯಾರ್ಥಿಗಳ ಸಮ್ಮುಖದಲ್ಲೇ ಬಯಲಾಗಿದ್ದು, ಎಲ್ಲರ ಎದುರು ಘಟನೆ ನಡೆದ ಪರಿಣಾಮ ಶಿಕ್ಷಕಿ ತಮಗೆ ರಮೇಶ್ ಬೇಡ ಎಂದು ಪೊಲೀಸ್ ದೂರು ನೀಡಲು ಮುಂದಾಗಿದ್ದಾರೆ. ಆದರೆ ರಮೇಶ ಮಾತ್ರ ನನಗೆ ಆಕೆಯೊಂದಿಗೆ ಮದುವೆ ಮಾಡಿಸಿ ಎಂದು ಊರಿನ ಹಿರಿಯರ ಮೊರೆ ಹೋಗಿದ್ದಾನೆ.