ಬೆಂಗಳೂರು: ವಿಧವೆಗೆ ಜೀವನ ಕೊಡುತ್ತೇನೆ ಎಂದು ಮದುವೆಯಾದ ಒಂದೇ ವರ್ಷಕ್ಕೆ ಟ್ರಾಫಿಕ್ ಪೊಲೀಸ್ ಪೇದೆ ಕೈಕೊಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಪ್ರದೀಪ್ ಮೋಸ ಮಾಡಿದ ಟ್ರಾಫಿಕ್ ಪೇದೆ. ಮಹಿಳೆ ಮದುವೆಯಾದ ಮೂರೇ ವರ್ಷಕ್ಕೆ ತನ್ನ ಪತಿಯನ್ನು ಕಳೆದುಕೊಂಡಿದ್ದಳು. ಅಲ್ಲದೆ ಮಹಿಳೆಗೆ ಒಂದು ಗಂಡು ಮಗು ಕೂಡ ಇದೆ. ಈ ನಡುವೆ ಮಹಿಳೆ ಪೊಲೀಸ್ ಪೇದೆ ಪ್ರದೀಪ್ನನ್ನು ಪರಿಚಯ ಮಾಡಿಕೊಂಡಿದ್ದಾಳೆ.
ಮಹಿಳೆ 2008ರಿಂದ ತನ್ನ ಪತಿಯೊಂದಿಗೆ ಬೆಂಗಳೂರಿನಲ್ಲೇ ವಾಸಿಸುತ್ತಿದ್ದಳು. ಮದುವೆಯಾಗಿ ಮೂರೇ ವರ್ಷಕ್ಕೆ ಪತಿ ಮೃತಪಟ್ಟಿದ್ದರು. ಬಳಿಕ ಮಹಿಳೆ ಫೇಸ್ಬುಕ್ನಲ್ಲಿ ಟ್ರಾಫಿಕ್ ಪೊಲೀಸ್ ಪೇದೆ ಪ್ರದೀಪ್ನನ್ನು ಪರಿಚಯ ಮಾಡಿಕೊಂಡಿದ್ದಳು. ಇವರಿಬ್ಬರ ಪರಿಚಯ ಸ್ನೇಹವಾಗಿ, ಒಬ್ಬರನೊಬ್ಬರು ಪ್ರೀತಿ ಮಾಡಲು ಶುರು ಮಾಡಿದ್ದರು.
ನನಗೆ ಮದುವೆಯಾಗಿ ಪತಿ ಮೃತಪಟ್ಟಿದ್ದು, ಒಬ್ಬ ಮಗನಿದ್ದಾನೆ ಎಂದು ಮಹಿಳೆ ಪ್ರದೀಪ್ಗೆ ತಿಳಿಸಿದ್ದಾಳೆ. ಆದರೂ ಪ್ರದೀಪ್, ಪರವಾಗಿಲ್ಲ ನಾನು ನಿಮಗೆ ಜೀವನ ಕೊಡುತ್ತೇನೆ ಎಂದು ಹೇಳಿ ಮಹಿಳೆಯೊಂದಿಗೆ ಸಂಬಂಧ ಬೆಳೆಸಿಕೊಂಡಿದ್ದಾನೆ. ಇದಾದ ಬಳಿಕ ಇಬ್ಬರು ದೇವಸ್ಥಾನದಲ್ಲಿ ಮದುವೆ ಆಗಿದ್ದಾರೆ. ಎಲ್ಲ ಮುಗಿದ ಬಳಿಕ ಪ್ರದೀಪ್ ನನಗೆ ಮೋಸ ಮಾಡಿದ್ದಾನೆ ಎಂದು ಮಹಿಳೆ ಕಣ್ಣೀರು ಹಾಕುತ್ತಿದ್ದಾಳೆ.
ಮದುವೆಯಾದ ಮೇಲೆ ಒಂದು ವರ್ಷ ಜೊತೆಯಲ್ಲೇ ವಾಸವಿದ್ದು ಕಳೆದ ಜೂನ್ ತಿಂಗಳಲ್ಲಿ ಪ್ರದೀಪ್ ಅವರ ಮನೆಯವರು ಬಂದು ನನ್ನ ಜೊತೆ ಜಗಳವಾಡಿದ್ದಾರೆ. ಅಲ್ಲದೆ ನನ್ನ ಮೇಲೆ ಹಲ್ಲೆ ಕೂಡ ಮಾಡಿ ನಮ್ಮಿಬ್ಬರನ್ನು ದೂರ ಮಾಡಿದ್ದಾರೆ. ವಿಧವೆ ನನ್ನ ಪತಿಯನ್ನು ನನಗೆ ಕೊಡಿಸಿ ಎಂದು ಪೊಲೀಸ್ ಕಮಿಷನರ್ ಗೆ ದೂರು ನೀಡಿದ್ದು ಇಲ್ಲಿಯವರೆಗೆ ಯಾವುದೇ ಪ್ರಯೋಜನವಾಗಿಲ್ಲ.